ಸೋಮವಾರಪೇಟೆ,ಜ.29: ‘ಇದ್ದಾಗ ದುಷ್ಟನಾದರೂ ಸತ್ತಾಗ ದೇವರಿಗೆ ಸಮ’ ಎಂಬ ಮಾತಿದೆ. ವ್ಯಕ್ತಿ ಸತ್ತ ಮೇಲೆ ಆತ ದೇವರಿಗೆ ಸಮಾನ ಎಂದು ಭಾವಿಸಿ ಪೂಜೆ ಪುನಸ್ಕಾರ ನಡೆಸಿಕೊಂಡು ಬರಲಾಗು ತ್ತಿದೆ. ಸತ್ತ ವ್ಯಕ್ತಿಯ ದೇಹವನ್ನು ಚಟ್ಟದಲ್ಲಿಟ್ಟು ಸ್ಮಶಾನಕ್ಕೆ ಕೊಂಡೊಯ್ಯುವ ಸಂಪ್ರದಾಯಗಳೂ ಸಮಾಜದಲ್ಲಿವೆ. ಇಂತಹ ಅದೆಷ್ಟೋ ‘ದೇವ’ರನ್ನು ತನ್ನ ಒಡಲಲ್ಲಿ ಇಟ್ಟು ಕೊಂಡಿರುವ ಹಾನಗಲ್ಲು ಬಾಣೆಯ ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆಯೇ ಇಲ್ಲ. ‘ನಮ್ಮನ್ನಾಳುವ ಜನನಾಯಕರೇ ಹೆಣ ಹೊರೋಕಾದ್ರೂ ರೋಡ್ ಮಾಡ್ಕೊಡಿ’ ಎಂದು ಅಂಗಲಾಚುವ ಸರದಿ ಹೆಣ ಹೊರುವ ಬದುಕಿರುವವರದ್ದು!
ಹೌದು! ಕೂಲಿ ಕಾರ್ಮಿಕರು, ನಿರ್ಗತಿಕರು, ನಿರ್ವಸತಿಗರು, ಅನಾಥರ ಪ್ರಾಣ ಹಾರಿದ ನಂತರದ ಕೊನೆಯ ಆಶ್ರಯತಾಣವಾಗಿರುವ ಹಾನಗಲ್ಲು ಬಾಣೆಯಲ್ಲಿರುವ ಸ್ಮಶಾನಕ್ಕೆ ಕಾನ್ವೆಂಟ್ ಬಾಣೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನೊಮ್ಮೆ...ಕ್ಷಮಿಸಿ ರಸ್ತೆಯೆಂದೇ ಹೇಳಲ್ಪಡುವ ಜಾಗವನ್ನೊಮ್ಮೆ ನೋಡಿದರೆ ಸಾಕು..! ಜನಪ್ರತಿನಿಧಿಗಳ ಕಾಳಜಿಯ ಸಾಕ್ಷಾತ್ ದರ್ಶನವಾಗುತ್ತದೆ.
ಸಮಸ್ಯೆಯ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕಾದರೆ.., ಹಾನಗಲ್ಲು ಬಾಣೆಯ ಸ್ಮಶಾನಕ್ಕೆ ಕಾನ್ವೆಂಟ್ ಬಾಣೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಿಂದ ಮೃತದೇಹಗಳನ್ನು ಹೊತ್ತೊಯ್ಯಲು ರಸ್ತೆಯಿಲ್ಲ. ಇದು ಇಂದು ನಿನ್ನೆಯ ಸಮಸ್ಯೆಯೂ ಅಲ್ಲ. ಹಾನಗಲ್ಲು ಬಾಣೆ ಗ್ರಾಮಕ್ಕೆ ಸುಮಾರು 35 ವರ್ಷಗಳ ಇತಿಹಾಸವಿದ್ದರೆ, ಅಲ್ಲಿರುವ ಸ್ಮಶಾನಕ್ಕೆ ಇನ್ನೂ ಹೆಚ್ಚಿನ ವರ್ಷಗಳ ಇತಿಹಾಸವಿದೆ.
ಸೋಮವಾರಪೇಟೆ ನಗರದ ಕೆಲಭಾಗ ಸೇರಿದಂತೆ ಆಲೇಕಟ್ಟೆ ರಸ್ತೆ, ಚೌಡ್ಲು, ಗಾಂಧಿನಗರ, ಕಲ್ಲಾರೆ, ಕಾನ್ವೆಂಟ್ ಬಾಣೆ, ಹಾನಗಲ್ಲು, ಕಪ್ಪೆಗುಂಡಿ, ಹಾನಗಲ್ಲು ಬಾಣೆ ಸೇರಿದಂತೆ ಇತರೆಡೆಗಳಲ್ಲಿ ಯಾವದಾದರೂ ಸಾವಾದರೆ ಇದೇ ಸ್ಮಶಾನಕ್ಕೆ ತರಬೇಕು. ಬೇರೆಡೆಗಳಿಂದ ಮೃತದೇಹಗಳನ್ನು ತರಲು ರಸ್ತೆಯ ಸೌಕರ್ಯವಿದೆಯಾದರೂ ಕಾನ್ವೆಂಟ್ ಬಾಣೆ, ಹಾನಗಲ್ಲು, ಕಪ್ಪೆಗುಂಡಿಯ ಕಡೆಯಿಂದ ಈ ಸ್ಮಶಾನಕ್ಕೆ ಮೃತದೇಹಗಳನ್ನು ತರಲು ಹರಸಾಹಸ ಪಡಬೇಕು.
ಅಷ್ಟಕ್ಕೂ ಈ ಸ್ಮಶಾನವನ್ನು ಅವಲಂಬಿಸಿರುವವರು ಕೂಲಿಕಾರ್ಮಿಕ, ಬಡಪಾಯಿ, ನಿರ್ಗತಿಕರು ಮಾತ್ರ. ಭೂ ಮಾಲೀಕರು ತಮ್ಮದೇ ತೋಟ, ಗದ್ದೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರೆ, ಬಡ ಬಗ್ಗರು ಅತ್ಯಧಿಕ ಸಂಖ್ಯೆಯಲ್ಲಿರುವ ಈ ಗ್ರಾಮಗಳಲ್ಲಿ ಸಾವು ಸಂಭವಿಸಿದರೆ ಇದೇ ಸ್ಮಶಾನ ಗತಿ. ಈ ಸ್ಮಶಾನವನ್ನು ಹೊರತುಪಡಿಸಿದರೆ ನಂತರ ಕರ್ಕಳ್ಳಿಗೆ ಮೃತದೇಹ ತೆಗೆದುಕೊಂಡು ಹೋಗಬೇಕು. ಕೂಲಿ ಕಾರ್ಮಿಕರಿಗೆ ವಾಹನ ಬಾಡಿಗೆ ಪಾವತಿಸುವದೂ ಕಷ್ಟಸಾಧ್ಯವಾಗಿರುವ ಹಿನ್ನೆಲೆ ಚಟ್ಟ ಕಟ್ಟಿಕೊಂಡೇ ಮೃತದೇಹವನ್ನು ಹಾನಗಲ್ಲು ಬಾಣೆಯ ಸ್ಮಶಾನಕ್ಕೆ ತರಬೇಕು. ಕಾನ್ವೆಂಟ್ ಬಾಣೆಯ ದೇವಾಲಯ ಸಮೀಪದಿಂದ ಕೇವಲ 600 ಮೀಟರ್ ದೂರದಲ್ಲಿ ಹಾನಗಲ್ಲು ಬಾಣೆಯ ಸ್ಮಶಾನವಿದ್ದು, ಇಲ್ಲಿಗೆ ತೆರಳಲು ರಸ್ತೆ ಮಾತ್ರ ಇಲ್ಲ. ಚೌಡ್ಲು ಗ್ರಾಮ ಪಂಚಾಯಿತಿ ಮೂಲಕ ದೇವಾಲಯದ ಬಳಿಯಿಂದ ಸುಮಾರು 15 ಮೀಟರ್ನಷ್ಟು ಕಾಂಕ್ರೀಟ್ ರಸ್ತೆ ಮಾಡಲಾಗಿದ್ದರೆ, ಅದರ ಮುಂದುವರೆದ ಭಾಗದಲ್ಲಿ ಕಲ್ಲುಗಳಿಂದ ಮೆಟ್ಟಿಲು ನಿರ್ಮಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಈ ಕಲ್ಲುಗಳು ಕಿತ್ತುಬಂದಿದ್ದು, ಕಿರಿದಾದ ದಾರಿಯಲ್ಲಿ ನಡೆದಾಡುವದೇ ತ್ರಾಸದಾಯಕವಾಗಿದೆ.
ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳೂ ಶಾಲಾ ಕಾಲೇಜಿಗೆ ತೆರಳುತ್ತಿದ್ದು, ನಡುವೆ ಹರಿಯುವ ಸಣ್ಣ ಕೊಲ್ಲಿಗೆ ಕಾಲು ಸೇತುವೆಯನ್ನು ಕಳೆದ 20 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದೀಗ ಸೇತುವೆಯೂ ದುಸ್ಥಿತಿಗೆ ತಲುಪಿದ್ದು, ಅಲ್ಲಲ್ಲಿ ಕಿತ್ತುಬಂದಿದೆ.
ಈ ಸಮಸ್ಯೆ ಒಂದೆಡೆಯಾದರೆ, ಹೆಣ ಹೊರುವ ಸಮಸ್ಯೆ ಮತ್ತೊಂದೆಡೆ. ಇಲ್ಲಿ ಒಬ್ಬರೇ ನಡೆದಾಡುವದೂ ಸಹ ಕಷ್ಟಕರವಾಗಿದ್ದು, ನಾಲ್ಕು ಮಂದಿ ಹೆಗಲುಕೊಟ್ಟು ಮೃತದೇಹವನ್ನು ಸಾಗಿಸುವ ಸಂಕಷ್ಟ ಇದುವರೆಗೂ ಜನಪ್ರತಿನಿಧಿಗಳಿಗೆ ಅರ್ಥವಾಗದೇ ಇರುವದು ದುರಂತವೇ ಸರಿ.
ಈ ಮಾರ್ಗದಲ್ಲಿ ಮೃತದೇಹವನ್ನು ಸಾಗಿಸುವಾಗ ಅದೆಷ್ಟೋ ಬಾರಿ ಮೃತದೇಹ ಕೆಳಬಿದ್ದಿರುವದೂ ಇದೆ. ಹೆಣ ಹೊರುವವರೂ ಸಹ ಕೊಲ್ಲಿಗೆ ಬಿದ್ದಿರುವ ನಿದರ್ಶನ ಕಣ್ಣೆದುರೇ ಇದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಈ ಭಾಗದ ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರುಗಳು, ಶಾಸಕರೂ ಸೇರಿದಂತೆ ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳೂ ಕಣ್ಣಿದ್ದೂ ಕುರುಡಾಗಿರುವದು ಯಾಕೆ? ಎಂಬ ಪ್ರಶ್ನೆ ಕಾಡತೊಡಗಿದೆ. -ವಿಜಯ್ ಹಾನಗಲ್