ಮಡಿಕೇರಿ, ಅ. 27: ಮಂಜಿನ ನಗರಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ದಿಢೀರಾಗಿ ಪೆಂಡಾಲ್ ಒಂದು ತಲೆ ಎತ್ತಿದೆ. ಅನುಮತಿ ನೀಡಬಾರದೆಂದು ನಿರ್ಣಯ ಕೈಗೊಂಡಿರುವ ನಗರಸಭೆ ಇದಕ್ಕೆ ಅನುಮತಿ ನೀಡಿರಲಿಲ್ಲ. ಅನುಮತಿ ನೀಡಿದವರಾರೆಂದು ವಿಚಾರಿಸಿದಾಗ ನಗರಸಭೆ ಉಪಾಧ್ಯಕ್ಷರು ಹೇಳಿದ್ದಾರೆಂದು ವಸ್ತು ಪ್ರದರ್ಶನ ಮಳಿಗೆ ಹಾಕಲು ಬಂದವರು ಹೇಳಿದ್ದರು. ಆದರೆ ಇದೀಗ ಉಪಾಧ್ಯಕ್ಷರು ಕೂಡ ತಾವು ಯಾವದೇ ಅನುಮತಿ ನೀಡಿಲ್ಲವೆಂದು ಹೇಳುತ್ತಿದ್ದಾರೆ. ಹಾಗಾದರೆ ಅನುಮತಿ ನೀಡಿದವರಾರು? ಎಂದು ಯಕ್ಷ ಪ್ರಶ್ನೆಯಾದರೆ..., ಇಲ್ಲಿ ಯಾರ ಅಪ್ಪಣೆಯೂ ಇಲ್ಲದೆ ಏನು ಬೇಕಾದರೂ ಮಾಡಬಹುದೆಂಬದಕ್ಕೆ ಇದೊಂದು ಸಾಕ್ಷಿ...!

ವಾಸ್ತವವಾಗಿ ವಸ್ತು ಪ್ರದರ್ಶನ ಮಳಿಗೆ ಹಾಕಲು ಗಾಂಧಿ ಮೈದಾನದಲ್ಲಿ ಅನುಮತಿ ನೀಡುವಂತೆ ಬೆಂಗಳೂರಿನ ಸಂಸ್ಥೆಯವರು ಅರ್ಜಿ ಸಲ್ಲಿಸಿದ್ದರು. ಸ್ಥಳೀಯ ಉದ್ಯಮಿಯೋರ್ವರೊಂದಿಗೆ ನಗರಸಭೆ ಆಯುಕ್ತರು, ಅಧ್ಯಕ್ಷರು, ಉಪಾಧ್ಯಕ್ಷರನ್ನು ಸಂಪರ್ಕಿಸಿದ್ದಾರೆ. ಆದರೆ ಅವರುಗಳು ಅನುಮತಿ ನೀಡಬಾರದೆಂದು ನಿರ್ಣಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗುವದೆಂದು ಹೇಳಿದ್ದಾರೆ. ಆದರೆ ಮಳಿಗೆಗೆ ಅಗತ್ಯವಿರುವ ಪೆಂಡಾಲ್ ನಿರ್ಮಿಸಲು ಸಾಮಗ್ರಿ ಹಾಗೂ ಇನ್ನಿತರ ಸಾಮಗ್ರಿಳೊಂದಿಗೆ ಲಾರಿಯಲ್ಲಿ ಬಂದಿದ್ದ ಸಂಸ್ಥೆಯವರು ‘ಎಲ್ಲ ಸಾಮಗ್ರಿಗಳನ್ನು ತಂದಾಗಿದೆ. ಮತ್ತೆ ವಾಪಸ್ ಕೊಂಡೊಯ್ದರೆ ನಷ್ಟ ಸಂಭವಿಸಲಿದೆ. ಸುಮ್ಮನೆ ನಿಲ್ಲಿಸಿಕೊಂಡರೆ ಲಾರಿ ಬಾಡಿಗೆ ಕೂಡ ವ್ಯರ್ಥವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಈ ಸಂದರ್ಭ ನಗರ ಸಭೆಯವರು ‘ವಸ್ತುಗಳನ್ನು ಮೈದಾನದ ಒಂದು ಬದಿಯಲ್ಲಿ ಇರಿಸಿಕೊಳ್ಳಿ. ಸಭೆಯಲ್ಲಿ ಅನುಮತಿ ದೊರೆತರೆ ಅವಕಾಶ ನೀಡಲಾಗುವದು’ ಎಂದು ಹೇಳಿದ್ದಾರೆ.

ಆದರೆ...,

ಸಾಮಗ್ರಿಗಳನ್ನು ಇಳಿಸಿದ ಸಂಸ್ಥೆಯವರು ಪೆಂಡಾಲ್ ಹಾಕುವವರು ದೂರದ ಹುಬ್ಬಳ್ಳಿಯಿಂದ ಬಂದಿದ್ದರಿಂದ ಅವರನ್ನು ಸುಮ್ಮನೆ ಇರಿಸಿಕೊಳ್ಳಬೇಕಲ್ಲ ಎಂದು ಪೆಂಡಾಲ್ ಹಾಕಿಯೇ ಬಿಟ್ಟಿದ್ದಾರೆ. ಸ್ಥಳೀಯರ ವಿರೋಧದಿಂದಾಗಿ ನಗರಸಭೆಗೆ ಮಾಹಿತಿ ತಿಳಿದು ಸ್ಥಗಿತಗೊಳಿಸಿದ್ದಾರೆ.

ಆದರೂ ಬೆಂಗಳೂರಿನಿಂದ ಬಂದು ಯಾರ ಅನುಮತಿ ಸಹಕಾರ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪೆಂಡಾಲ್ ಹಾಕಲು ಯಾರಿಗೂ ಧೈರ್ಯ ಬರುವದಿಲ್ಲ. ಇದರ ಹಿಂದೆ ‘ಕಾಣದ ಕೈಗಳು’ ಇರುವದಂತೂ ದಿಟ...!

-ಸಂತೋಷ್