ಸೋಮವಾರಪೇಟೆ, ಸೆ. 7: ಸಾರ್ವಜನಿಕರ ಕುಂದುಕೊರತೆ ಆಲಿಸಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರಿ ಇಲಾಖಾಧಿಕಾರಿಗಳೇ ಗ್ರಾಮ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಮಸಭೆಯನ್ನು ಬಹಿಷ್ಕರಿಸಿದ ಘಟನೆ ಗೌಡಳ್ಳಿಯಲ್ಲಿ ನಡೆಯಿತು.ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ರಾಮಚಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಪ್ರಾರಂಭ ವಾಗುತ್ತಿದ್ದಂತೆ, ಸಭೆಗೆ ಗೈರಾದ ಅಧಿಕಾರಿಗಳ ವಿವರ ನೀಡುವಂತೆ ಎಸ್.ಬಿ. ಭರತ್ ಕುಮಾರ್, ಕೂಗೂರು ಜಯಪ್ಪ, ಪ್ರಸಿ, ಎಂ.ಜಿ. ಯತೀಶ್ ಸೇರಿದಂತೆ ಇತರರು ಆಗ್ರಹಿಸಿದರು. ಗ್ರಾಮ ಸಭೆಗೆ ಅರಣ್ಯ ಇಲಾಖೆ, ಅಬಕಾರಿ, ತೋಟಗಾರಿಕೆ, ಸೆಸ್ಕ್, ಜಿಪಂ ಇಂಜಿನಿಯರಿಂಗ್ ವಿಭಾಗ, ಪಿಡಬ್ಲ್ಯೂಡಿ, ಕಂದಾಯ ಇಲಾಖೆ ಅಧಿಕಾರಿಗಳು ಗೈರಾಗಿರುವ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಿಖಿತ ಅವರು ಸಭೆಯ ಗಮನಕ್ಕೆ ತಂದರು.
ಕಾಡಾನೆ ಹಾವಳಿಯಿಂದ ಕಾಫಿ ಬೆಳೆಗಾರರು ಮತ್ತು ರೈತಾಪಿ ವರ್ಗ ನಷ್ಟ ಅನುಭವಿಸುತ್ತಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಗ್ರಾಮಸಭೆಗೆ ಬಂದರೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಬಂದಿಲ್ಲ. ಏತಕ್ಕಾಗಿ ಗ್ರಾಮಸಭೆ ನಡೆಸುತ್ತಿರಾ? ಎಂದು ಕೂಗೂರು ಜಯಪ್ಪ ಪ್ರಶ್ನಿಸಿ, ಅಧಿಕಾರಿಗಳಿಲ್ಲದೆ ಗ್ರಾಮಸಭೆ ನಡೆಸುವದು ಬೇಡ ಎಂದು ಎದ್ದು ಹೊರ ನಡೆದರು.
ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತೇವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡುತ್ತಾರೆ. ಗ್ರಾಮಸಭೆಗೆ ಅಧಿಕಾರಿಗಳು ಗೈರಾಗುತ್ತಾರೆ. ಗ್ರಾಮೀಣ ರಸ್ತೆಗಳು ಗುಂಡಿಬಿದ್ದು ಬಾಳೆ ಕೃಷಿ ಮಾಡಬಹುದು. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ರೈತರು ಗ್ರಾಮಸಭೆಗೆ ಬಂದರೆ, ಅಧಿಕಾರಿಗಳು ಗೈರಾಗಿ ಗ್ರಾಮಸಭೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಭರತ್ ಕುಮಾರ್ ಹಾಗು ಗೌಡಳ್ಳಿ ಪ್ರಸಿ ಅಕ್ರೋಶ ವ್ಯಕ್ತಪಡಿಸಿದರು.
ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿ ಗಳಿಗೆ ಪತ್ರ ಬರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರ ಒತ್ತಾಯದಂತೆ ಗ್ರಾಮ ಸಭೆಯನ್ನು ಮುಂದೂಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.