ಬೆಂಗಳೂರು, ಜು.19: ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಪರಿಣಾಮಕಾರಿ ರೂಪ ಪಡೆಯುತ್ತಿದೆ. ನಿನ್ನೆ ದಿನ ಮಡಿಕೇರಿಯ ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಲಯವು ಮೂವರು ಪ್ರಭಾವಿ ಆರೋಪಿತರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಮಡಿಕೇರಿ ನಗರ ಪೊಲೀಸರಿಗೆ ನಿರ್ದೇಶನ ನೀಡಿದ ಬಳಿಕ ಆರೋಪಿತ ಹಿರಿಯ ಅಧಿಕಾರಿಗಳಿಬ್ಬರು ಇದೀಗ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇಂದು ನ್ಯಾಯಾಲಯದಲ್ಲಿ ರಾಜ್ಯ ಲೋಕಾಯುಕ್ತ ಐ.ಜಿ.ಪಿ ಪ್ರೊಣಬ್ ಮೊಹಂತಿ, ರಾಜ್ಯ ಇಂಟೆಲಿಜೆನ್ಸ್ ಐ.ಜಿ.ಪಿ ಎ.ಎಂ. ಪ್ರಸಾದ್ ಇವರುಗಳು ವಕೀಲರು ಗಳಾದ ಸಿ.ವಿ.ನಾಗೇಶ್ ಹಾಗೂ ಕೆ.ರಾಘವೇಂದ್ರ ಇವರುಗಳ ಮೂಲಕ ಕ್ರಿಮಿನಲ್ ಪಿಟಿಷನ್ ಸಲ್ಲಿಸಿದರು. ಮಡಿಕೇರಿ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಸಮ್ಮತಿ ನೀಡದ ನ್ಯಾಯಾಧೀಶರಾದ ಹೆಚ್. ಬಿಳ್ಳಪ್ಪ ಅವರು ಅರ್ಜಿದಾರರ ವಕೀಲರು ದೂರುದಾರರಾದ ನೇsÀಹಾಲ್ ಗಣಪತಿ ಅವರಿಗೆ ಮೇಲ್ಮನವಿಯ ಪ್ರತಿಯನ್ನು ಕಳುಹಿಸುವಂತೆ ಸೂಚಿಸಿದರು. ಅಲ್ಲದೆ, ನೇಹಾಲ್ ಅವರು ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶವುಂಟಾಗುವಂತೆ ತಾ. 20 (ಇಂದು) ರಂದು ಅವರು ನ್ಯಾಯಾಲಯಕ್ಕೆ ಅವರ ವಕೀಲರ ಮೂಲಕ ವಾದ ಮಂಡಿಸಲು ಅನುವಾಗುವಂತೆ ನೋಟೀಸ್ ಕಳುಹಿಸಲು ಆದೇಶ ನೀಡಿದರು. ಸರಕಾರಕ್ಕೂ ಈ ಕುರಿತು ನೋಟೀಸ್ ಕಳುಹಿಸಲು ಆದೇಶವಿತ್ತರು.
ಆರೋಪಿತ ಅಧಿಕಾರಿಗಳ ಪರವಾಗಿ ಇಂದು ವಾದಿಸಿದ ವಕೀಲರು ಈ ಹಿಂದಿನ ಆನೇಕ ತೀರ್ಪುಗಳನ್ನು ಉಲ್ಲೇಖಿಸಿ ಹಾಗೂ ಸೆಕ್ಷನ್ 156(3) ರ ಅನ್ವಯ ಪೊಲೀಸರು ತನಿಖೆ ನಡೆಸಲು ನಿರ್ದೇಶಿಸುವ ಮುನ್ನ ಪರಿಶೀಲಿಸಬೇಕಾಗಿದ್ದ ಅಗÀತ್ಯ ಅಂಶಗಳ ಕುರಿತು ವಾದ ಮಂಡಿಸಿದರು. ಅಲ್ಲದೆ ಈಗಾಗಲೇ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿರುವದರಿಂದ ಖಾಸಗಿ ದೂರು ನೀಡುವ ಮುನ್ನ ಪೂರ್ವಾನುಮತಿ ಪಡೆಯಬೇಕಾಗಿದ್ದ ಅಗತ್ಯದ ಕುರಿತು ವಕೀಲರು ವಾದಿಸಿದರು..
ಆದರೆ, ಇದೀಗ ರಾಜ್ಯ ಉಚ್ಚ ನ್ಯಾಯಾಲಯವು ಏಕಪಕ್ಷೀಯ ತೀರ್ಮಾನಕ್ಕೆ ಸಮ್ಮತಿಸದೆ, ಮಧ್ಯಂತರ ತಡೆಯಾಜ್ಞೆಯನ್ನೂ ನೀಡದೆ ದೂರುದಾರರಾದ ನೇಹಾಲ್ ಗಣಪತಿ ಅವರಿಗೂ ಮುಕ್ತ ಅವಕಾಶ ನೀಡಿ ಇಂದು ಮಧ್ಯಂತರ ಅದೇಶ ನೀಡಲು ನಿರಾಕರಿಸಿರುವದು ವಿಶಿಷ್ಟ ಬೆಳವಣಿಗೆಯೆನಿಸಿದೆ.