ಮಡಿಕೇರಿ, ಜ. 14: ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ತಾ. 17 ರಂದು (ಇಂದು) ನಗರದ ಕಾವೇರಿ ಹಾಲ್ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಲಾಗು ವದೆಂದು ಅಧ್ಯಕ್ಷ ಬಿ.ಎನ್. ಪ್ರಕಾಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಸಂಸ್ಥೆಯ ಕಾನೂನು ಸಲಹೆಗಾರರಾಗಿದ್ದ ಶಾಸಕ ಕೆ.ಜಿ.ಬೋಪಯ್ಯ, ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ.ಪಿ. ರಮೇಶ್ ಹಾಗೂ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿದ್ದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರುಗಳನ್ನು ಸನ್ಮಾನಿಸಲಾಗುವ ದೆಂದರು.
ಸಂಘಟನಾ ಕಾರ್ಯದರ್ಶಿ ಎಂ.ಬಿ.ಕೇಶವ ಕಾಮತ್ ಮಾತನಾಡಿ, ವರ್ತಕರಿಗೆ ಜಿಎಸ್ಟಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ತೆರಿಗೆ ಇಲಾಖೆ ಆಯುಕ್ತ ಗಿರಿಯಣ್ಣ ಹಾಗೂ ಅಧಿಕಾರಿ ಕುಮಾರ್ ಸಮಗ್ರ ಮಾಹಿತಿಯನ್ನು ನೀಡಲಿದ್ದಾರೆ ಎಂದರು. ಎಲ್ಲಾ ವರ್ತಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಎಸ್ಟಿಯ ಸಾಧಕ ಬಾಧಕಗಳ ಬಗ್ಗೆ ಅರಿತುಕೊಳ್ಳ ಬಹುದೆಂದರು.
ಸುವರ್ಣ ಸಂಭ್ರಮ ಆಚರಣಾ ಸಮಿತಿಯ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಮಾತನಾಡಿ, ಸಂಸ್ಥೆಯ ಎಲ್ಲಾ 24 ಸ್ಥಾನೀಯ ಸಮಿತಿ ಅಧ್ಯಕ್ಷರುಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಗೌರವಿಸಲಾಗುವದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಕುಶಾಲಪ್ಪ ಹಾಗೂ ಮಡಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಉಪಸ್ಥಿತರಿದ್ದರು.