ಕುಶಾಲನಗರ, ಅ. 7: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರದ ಅಧ್ಯಯನ ತಂಡದ ಕೆಲವು ಅಧಿಕಾರಿಗಳು ಹಾರಂಗಿ ಜಲಾಶಯಕ್ಕೆ ತಾ. 8ರಂದು (ಇಂದು) ಬೆಳಿಗ್ಗೆ ಭೇಟಿ ನೀಡಲಿದ್ದಾರೆ. ಹಾರಂಗಿ ಜಲಾಶಯದ ನೀರಿನ ಸಂಗ್ರಹ ಪ್ರಮಾಣ ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಜ್ಞರ ತಂಡ ಈಗಾಗಲೆ ಕಳೆದ ಎರಡು ದಿನಗಳಿಂದ ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಭಾಗಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಮುಖ್ಯ ತಂಡದ ಸದಸ್ಯರು ಹಾರಂಗಿ ಅಣೆಕಟ್ಟೆ ಪ್ರದೇಶಕ್ಕೆ ಭೇಟಿ ನೀಡುವ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ ಎಂದು ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ತಜ್ಞರ ತಂಡ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಹಾರಂಗಿಯಲ್ಲಿ ಸಕಲ ಪೂರ್ವ ತಯಾರಿ ನಡೆಸಿದ್ದು ಹೆಲಿಪ್ಯಾಡ್ ವ್ಯವಸ್ಥೆ ಕಲ್ಪಿಸಲಾಗಿದೆ. ತಜ್ಞರ ತಂಡಕ್ಕೆ ನೀಡಬೇಕಾದ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.