ಪೊನ್ನಂಪೇಟೆ, ಜು. 30: ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ 4ನೇ ವರ್ಷದ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ 2016 ಭಾನುವಾರದಂದು (ಇಂದು) ಬಿಟ್ಟಂಗಾಲದಲ್ಲಿ ನಡೆಯಲಿದೆ. ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯ ಬಿಟ್ಟಂಗಾಲದಲ್ಲಿರುವ ನಿವೃತ ಮೇ.ಜ ಕುಪ್ಪಂಡ ಪಿ. ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ಆಯೋಜಿಸಲಾಗಿರುವ ಕೆಸರು ಗದ್ದೆ ಕ್ರೀಡೆಗಾಗಿ ಸಿದ್ಧತೆಗಳು ಪೂರ್ಣಗೊಂಡಿದೆ.

ಕಳೆದ ಕೆಳ ದಿನಗಳಿಂದ ವರುಣ ಅಲ್ಪ ಬಿಡುವು ನೀಡಿದ್ದರೂ ಶನಿವಾರ ಬೆಳಿಗ್ಗೆಯಿಂದಲೆ ತುಂತುರು ಹನಿಯ ಸಿಂಚನ ಆರಂಭಿಸಿ ಆಯೋಜಕರಿಗೆ ಭಯ ಮೂಡಿಸಿದೆ. ಶನಿವಾರದ ತುಂತುರು ಮಳೆಯ ನಡುವೆಯೂ ಪೊನ್ನಂಪೇಟೆ ನಿಸರ್ಗ ಜೇಸಿಸ್ ತಂಡ ಕ್ರೀಡೋತ್ಸವದ ಅಂತಿಮ ಹಂತದ ಸಿದ್ಧತೆಯಲ್ಲಿ ರಾತ್ರಿವರೆಗೂ ತೊಡಗಿತು. ಕ್ರೀಡೋತ್ಸವ ಜರುಗುವ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ಸಿದ್ದಪಡಿಸಲಾಗಿದ್ದು, ಗದ್ದೆಯಲ್ಲಿ ಜೇಸಿ ಸದಸ್ಯರು 2 ಫುಟ್ಬಾಲ್ ಅಂಕಣವನ್ನು ರೂಪಿಸಿದ್ದಾರೆ. ಅಲ್ಲದೇ ಅದರ ಸಮೀಪದಲ್ಲೆ ಹಗ್ಗ - ಜಗ್ಗಾಟ ಸ್ಪರ್ಧೆಗೂ ವ್ಯವಸ್ಥೆಗೊಳಿಸಲಾಗಿದೆ. ಗದ್ದೆಯ ಬದಿಯೊಂದರಲ್ಲಿ ಸುಸಜ್ಜಿತ ವಾಟರ್ ಪ್ರೂಫ್ ವೇದಿಕೆಯನ್ನು ನಿರ್ಮಿಸಲಾಗಿದೆ. ಗದ್ದೆಯ ಇಡೀ ಆವರಣವನ್ನು ಕ್ರೀಡೋತ್ಸವಕ್ಕಾಗಿ ಸಜ್ಜುಗೊಳಿಸಲಾಗಿದೆ.

ಈಗಾಗಲೇ ಜಿಲ್ಲೆಯ ವಿವಿಧೆಡೆ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಫುಟ್ಬಾಲ್ ತಂಡಗಳು ಪಾಲ್ಗೊಳ್ಳುವ ಮಾಹಿತಿ ದೊರೆತಿದ್ದು, ಕ್ರೀಡೋತ್ಸವ ಜರುಗುವ ಭಾನುವಾರದಂದೆ ತಂಡಗಳ ನೋಂದಣಿ ಕಾರ್ಯ ಮಾಡುವದಾಗಿ ನಿಸರ್ಗ ಜೇಸಿ ತಂಡ ತಿಳಿಸಿದೆ. ಹೆಚ್ಚು ತಂಡ ಪಾಲ್ಗೊಂಡಾಗ ಫÉೈನಲ್ಸ್ ಪಂಧ್ಯ ತಡವಾಗುವದರಿಂದ ಈ ಬಾರಿ ಗರಿಷ್ಠ 40 ತಂಡಗಳನ್ನು ಮಾತ್ರ ಪರಿಗಣಿಸುವುದಾಗಿ ತಿಳಿಸಿದೆ. ಅದಕ್ಕಾಗಿ ಮೊದಲು ಬಂದ 40 ತಂಡಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಪಾಲ್ಗೊಳ್ಳುವ ತಂಡಗಳು ಬೆಳಿಗ್ಗೆ 9.30ರ ಒಳಗಾಗಿ ಸ್ಥಳದಲ್ಲಿ ಹಾಜರಿರಬೇಕಾಗಿರುವದು ಕಡ್ಡಾಯವಾಗಿದೆ. ಹಗ್ಗ -ಜಗ್ಗಾಟ ಸ್ಪರ್ಧೆಗೆ ರಾಜ್ಯ ಕೆಲವು ಪ್ರತಿಷ್ಠಿತ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಡ್ಯ ಮತ್ತು ಕೊಡಗು ಪೊಲೀಸ್ ತಂಡ ಹಗ್ಗ- ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವದು ಬಹುತೇಕ ಖಚಿತವಾಗಿದೆ. ವಿವಿಧ ವಿಭಾಗದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಬೆಳಿಗ್ಗೆ 10.00 ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಬೆಳಿಗ್ಗೆ 10 ಗಂಟೆಗೆ ಕ್ರೀಡೋತ್ಸವವನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ ಸುನಿಲ್ ಸುಬ್ರಮಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕ್ರೀಡೋತ್ಸವದ ಮುಖ್ಯ ಪ್ರಾಯೋಜಕ ಕಡೇಮಾಡ ಕನಸು ದೇವಯ್ಯ, ನಿವೃತ ಸೇನಾಧಿಕಾರಿ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಬಿ.ಈ ಕಿರಣ್ ತಿಳಿಸಿದ್ದಾರೆ.