*ಗೋಣಿಕೊಪ್ಪಲು, ಸೆ. 30: ದಸರಾ ಜನೋತ್ಸವವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ.

ತಾ. 1ರಂದು (ಇಂದು) ಬೆಳಿಗ್ಗೆ 8.30 ಕ್ಕೆ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ದೊರೆಯಲಿದೆ.

ದಸರಾ ಸಮಿತಿ ಉತ್ಸವಕ್ಕೆ ಸಕಲ ಸಿದ್ಧತೆಯಲ್ಲಿ ತೊಡಗಿ ಸಜ್ಜಾಗಿದೆ. ಸರ್ಕಾರ 25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಪೂರ್ವ ತಯಾರಿ ಕೈಗೊಂಡು ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 7 ಲಕ್ಷದ ವೆಚ್ಚದ 120 ಅಡಿಯ ಉದ್ದ ಹಾಗೂ 60 ಅಡಿ ಅಗಲದ ವೇದಿಕೆ ಹಾಗೂ ಸಭಾಂಗಣವನ್ನು ನಿರ್ಮಿಸಲಾಗಿದೆ.

ಸುಮಾರು 1500ಕ್ಕೂ ಹೆಚ್ಚು ಆಸನಗಳನ್ನು ಅಳವಡಿಸಲಾಗಿದೆ. ವೇದಿಕೆಯ ಬದಿಯಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಲು ದೇವರ ಮಂಟಪ ನಿರ್ಮಾಣಗೊಂಡಿದೆ.

ದಸರಾ ಉತ್ಸವ ಆಚರಿಸಲು ನಿರ್ಮಾಣಗೊಂಡಿರುವ ಬೃಹತ್ ನಿರ್ಮಾಣದ ಕಾವೇರಿ ಕಲಾ ವೇದಿಕೆಯಲ್ಲಿ ಹತ್ತು ದಿನಗಳು ಮನರಂಜನೆಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6 ರಿಂದ 7 ರ ತನಕ ಸ್ಥಳೀಯ ಪ್ರತಿಭೆಗಳ ಪ್ರದರ್ಶನ ಅನಾವರಣಗೊಳ್ಳಲಿದೆ. ನಂತರ ಸಭಾ ಕಾರ್ಯಕ್ರಮ, ತದನಂತರ ಸಾಂಸ್ಕøತಿಕ ರಸಮಂಜರಿ ನಡೆಯಲಿವೆ. ಈ ಬಾರಿ ದಸರಾ ಆಚರಣೆಯಲ್ಲಿ ವಿಶೇಷವಾಗಿ ಮಹಿಳಾ ದಸರಾ, ಡರ್ಟ್ ಟ್ರ್ಯಾಕ್ ರ್ಯಾಲಿ ನಡೆಯಲಿದೆ.

ತಾ. 11 ರಂದು ರಾತ್ರಿ ದಶಮಂಟಪಗಳ ಭವ್ಯ ಶೋಭಾಯಾತ್ರೆಯೊಂದಿಗೆ ದಸರಾ ಉತ್ಸವ ಕೊನೆಗೊಳ್ಳಲಿದೆ.

ದಸರಾ ಪ್ರಮುಖ ಆಕರ್ಷಣೆ ಯಾಗಿರುವ ಶೋಭಯಾತ್ರೆಯಲ್ಲಿ ಕಾವೇರಿ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಹರಿಶ್ಚಂದ್ರಪುರ ನಮ್ಮ ದಸರಾ ಸಮಿತಿ, ಶಾರದಾಂಬ ದಸರಾ ಸಮಿತಿ, ನಾಡಹಬ್ಬ ಸಮಿತಿ, ಸರ್ವರ ದಸರಾ ಸಮಿತಿ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ಕೈಕೇರಿಯ ಭಗವತಿ ಹಾಗೂ ಸ್ನೇಹಿತರ ಬಳಗ ಕೊಪ್ಪ ಸಮಿತಿಗಳು ಮೆರುಗು ತರುವಲ್ಲಿ ಕಾರ್ಯೋನ್ಮುಖವಾಗಿವೆ. ದಶಮಂಟಪಗಳ ಶೋಭಾ ಯಾತ್ರೆಯಲ್ಲಿ ಉತ್ಸವ ಸಮಿತಿಯಿಂದ ಹೊರತರಲಾಗುವ ಕಲಾಕೃತಿ ಎಲ್ಲರಿಗಿಂತಲೂ ವಿಭಿನ್ನವಾಗಿರ ಬೇಕೆಂಬ ಬಯಕೆ, ತುಡಿತ ಸಮಿತಿಯವರದ್ದಾಗಿದೆ. ಇದಕ್ಕಾಗಿ ಅಹೋರಾತ್ರಿ ಎಲ್ಲಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.