ಮಡಿಕೇರಿ, ಜ. 31: ಕರ್ನಾಟಕದ ಹೆಸರಾಂತ ರಂಗಶಿಕ್ಷಣ ಕೇಂದ್ರ ನೀನಾಸಂನ ವತಿಯಿಂದ “ಕಾಲಂದುಗೆಯ ಕಥೆ” ಹಾಗೂ “ಅತ್ತ ದರಿ ಇತ್ತ ಪುಲಿ” ನಾಟಕವನ್ನು ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಫೆ. 1 (ಇಂದು) ಮತ್ತು 2 ರಂದು ಪ್ರಸ್ತುತಪಡಿಸಲಾಗುವದು.

ಈ ಎರಡು ದಿನದ ನಾಟಕೋತ್ಸ ವದಲ್ಲಿ ಅನೇಕ ದಶಕಗಳಿಂದ ಕನ್ನಡ, ಇತರ ಭಾರತೀಯ ಭಾಷೆಗಳು ಹಾಗೂ ಪಾಶ್ಚಾತ್ಯ ಅನುವಾದ-ರೂಪಾಂತರದ ನಾಟಕಗಳನ್ನು ಕರ್ನಾಟಕದ ಸಾಂಸ್ಕøತಿಕ ವಲಯಕ್ಕೆ ಪರಿಚಯಿಸುತ್ತ ಬಂದಿರುವ ನೀನಾಸಂ ತಿರುಗಾಟದ ಅಂಗವಾಗಿ ಈ ನಾಟಕಗಳು ಪ್ರಸ್ತುತಗೊಳ್ಳಲಿವೆ.

ನೀನಾಸಂ ತಿರುಗಾಟದ ಈ ವರ್ಷದ ಮೊದಲನೇ ನಾಟಕ “ಕಾಲಂದುಗೆಯ ಕಥೆ”ಯನ್ನು ನಿರ್ದೇಶಿಸಿದವರು ಬಿ. ಆರ್. ವೆಂಕಟರಮಣ ಐತಾಳ್ ತಮಿಳು ಮಹಾಕಾವ್ಯ ‘ಶಿಲಪ್ಪದಿಕಾರಂ’ ಆಧರಿಸಿದ ಕಣ್ಣಗಿ-ಕೋವಲರ ಪ್ರೇಮಕಥೆಯ ಹಂದರದಲ್ಲಿ ಪ್ರಾಚೀನ ತಮಿಳಿನ ಚೋಳ-ಪಾಂಡ್ಯ-ಚೇರ ನಾಡಿನ ಬದುಕನ್ನು ಈ ನಾಟಕ ಚಿತ್ರಿಸುತ್ತದೆ. ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವಂತೆ ಪ್ರಸ್ತುತ ರಂಗಪ್ರಯೋಗವನ್ನು ಕಟ್ಟಲಾಗಿದೆ.

ಎರಡನೇ ನಾಟಕ “ಅತ್ತ ದರಿ ಇತ್ತ ಪುಲಿ” ನಿರ್ದೇಶಿಸಿರುವವರು ಹೈಸ್ನಾಮ್ ತೋಂಬಾ. ಈಶಾನ್ಯ ಭಾರತದ ಪುಟ್ಟ ರಾಜ್ಯವಾದ ಮಣಿಪುರದ ಹಿಂಸೆಯ ಇತಿಹಾಸವನ್ನು ನಿಜ ಘಟನೆ ಮತ್ತು ರಂಗರೂಪಕಗಳ ಮುಖಾಂತರ ಕಟ್ಟುವ ಪ್ರಯತ್ನವಾಗಿ ಈ ನಾಟಕ ಮೂಡಿಬರಲಿದೆ.

ನಾಟಕ ಪ್ರದರ್ಶನಗಳಿಗೆ ಸರ್ವ ಆಸಕ್ತರಿಗೂ ಮುಕ್ತ ಸ್ವಾಗತವಿದೆ ಎಂದು ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.