ಗೋಣಿಕೊಪ್ಪಲು, ಜ. 21: ಹಾಕಿಕೂರ್ಗ್ ವತಿಯಿಂದ ಪಾಲಂದೀರ ಅಪ್ಪಯ್ಯ ಸ್ಮಾರಕ ಮಹಿಳಾ ಹಾಕಿ ಲೀಗ್ ತಾ. 22 ರಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದು ಪಂದ್ಯಾವಳಿ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗದ ಸಬ್ ಜೂನಿಯರ್, ಜೂನಿಯರ್ ಹಾಗೂ ಹಿರಿಯ ತರಬೇತಿ ತಂಡದ ಆಟಗಾರರು ವಿವಿಧ ತಂಡಗಳಲ್ಲಿ ಪಾಲ್ಗೊಳ್ಳಲಿರುವದು ಟೂರ್ನಿಯ ವಿಶೇಷತೆಯಾಗಿದೆ. 8 ತಂಡಗಳು ಪಾಲ್ಗೊಳ್ಳಲಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ 8 ತಂಡಗಳು ಪಾಲ್ಗೊಂಡಿದ್ದವು. ಕಳೆದ ಬಾರಿಯ ಕೋರಲ್ ವಾಟರ್ ಹೆಸರಿನ ತಂಡ ಈ ಬಾರಿ ಪಾಲ್ಗೊಳ್ಳುತ್ತಿದೆ. ಉಳಿದ 7 ತಂಡಗಳು ಈ ಬಾರಿ ಹೊಸದಾಗಿ ಸೇರ್ಪಡೆಗೊಂಡಿವೆ. ಈ ಬಾರಿ ಮತ್ರಂಡ ಬೋಪಣ್ಣ ಮಾಲಿಕತ್ವದ ಭರಣಿ ತಂಡ, ಬುಟ್ಟಿಯಂಡ ಬೋಪಣ್ಣ ಅವರ ಟೀಮ್ ಬುಟ್ಟಿಯಂಡ, ಭಗವತಿ ಕ್ಲಬ್ನ ಕೈಕೇರಿ ಭಗವತಿ, ಕೃಷ್ಣ, ಕೋಳೇರ ರಾಖಿ, ಪಾಡೆಯಂಡ ದೀಪಕ್ ಹಾಗೂ ಗುಮ್ಮಟ್ಟೀರ ಮುತ್ತಣ್ಣ ಮಾಲೀಕತ್ವದ ಕೋರಲ್ ವಾಟರ್, ಡಾ. ಬೋಪಣ್ಣ ಹಾಗೂ ಮಂಡೇಪಂಡ ಸುಷ್ಮಾ ಮಾಲಿಕತ್ವದ ಹಾಕಿ ಅಮ್ಮತ್ತಿ, ಅರೆಯಡ ಪೊನ್ನಣ್ಣ ಮಾಲೀಕತ್ವದ ನಾಲ್ನಾಡ್ ಟೀಂ, ಶುಭ್ಕರ್ ರಾವ್ ಅವರ ಅಧಿತಿ ಟ್ಯಾಂಜರಿಯಸ್ ಹಾಗೂ ಫ್ಲೆಮಿಂಗೋ ತಂಡಗಳು ಪಾಲ್ಗೊಳ್ಳುತ್ತಿವೆ ಎಂದರು.
ಪ್ರತಿ ಆಟಗಾರರಿಗೂ ಆರ್ಥಿಕವಾಗಿ ಪ್ರೋತ್ಸಾಹ ನೀಡಲು ಕನಿಷ್ಟ 1 ಸಾವಿರದವರೆಗೆ ಹಣ ನೀಡಲಿದೆ.
ತಾ. 22 ರಿಂದ 26 ರ ವರೆಗೆ ಟೂರ್ನಿ ನಡೆಯಲಿದೆ. 8 ತಂಡಗಳು 2 ಪೂಲ್ಗಳಲ್ಲಿ ಭಾಗವಹಿಸಲಿವೆ. ಮೊದಲು ಲೀಗ್ ಹಂತದಲ್ಲಿ ಪಂದ್ಯಗಳು ನಡೆಯಲಿವೆ. ನಂತರ ಪೂಲ್ನ ಮೇಲಿನ 4 ತಂಡಗಳು ಸೆಮಿ ಫೈನಲ್ ಮೂಲಕ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಲಿವೆ. 26 ರಂದು ಫೈನಲ್ ಹಣಾಹಣಿ ನಡೆಯಲಿದೆ. ಕೋರಲ್ ವಾಟರರ್ಸ್ ಪರ ಅಂತರರಾಷ್ಟ್ರೀಯ ಹಾಕಿ ಆಟಗಾರ್ತಿ ಮಲ್ಲಮಾಡ ಪೊನ್ನಮ್ಮ ಆಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಹಾಕಿಕೂರ್ಗ್ ಉಪಾಧ್ಯಕ್ಷ ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಪಳಂಗಮಡ ಲವಕುಮಾರ್, ಖಜಾಂಜಿ ಲಾಲಾ ಅಯ್ಯಣ್ಣ, ಕೋರಲ್ ವಾರರ್ಸ್ ಮಾಲಿಕರಾದ ಕೋಳೇರ ರಾಖಿ ಉಪಸ್ಥಿತರಿದ್ದರು.