ಶನಿವಾರಸಂತೆ, ಜ. 26: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಪ್ರತಿ ವರ್ಷ ನಡೆಯುವ ಜಯದೇವ ಜಾನುವಾರು ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದು, ಈ ಬಾರಿ ತಾ. 27 ರಂದು (ಇಂದಿನಿಂದ) ಆರಂಭಗೊಳ್ಳಲಿರುವ ಈ ಜಾತ್ರೆ ಫೆ. 8 ರವರೆಗೆ ನಡೆಯಲಿದೆ.70 ವರ್ಷಗಳ ಹಿಂದೆ ಚಿತ್ರದುರ್ಗದ ಜಯದೇವ ಮುರುಘ ರಾಜೇಂದ್ರ ಸ್ವಾಮೀಜಿ ಸೋಮವಾರಪೇಟೆ ತಾಲೂಕಿನ ಬೇಳೂರು ಮಠಕ್ಕೆ ಭೇಟಿ ನೀಡಿದ್ದರು. ಆಗ ಇದೇ ಜಾತ್ರಾ ಮೈದಾನದಲ್ಲಿ ಅವರ ನೇತೃತ್ವದಲ್ಲಿ ವೀರ ಶೈವ ಧರ್ಮ ಸಮ್ಮೇಳನ ನಡೆದಿತ್ತು. ಆ ಸಮ್ಮೇಳನದ ನೆನಪಿಗಾಗಿ ಪ್ರತಿ ವರ್ಷ ಇಲ್ಲಿ ಜಾನುವಾರು ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಅದಲ್ಲದೇ ಈ ಜಾತ್ರೆ ಜಯದೇವ ಜಾನುವಾರು ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

1943ರಲ್ಲಿ ಜಾತ್ರಾ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಿ ಉತ್ಸವವನ್ನು ಆರಂಭಿಸಲಾಯಿತು. ವರ್ಷಗಳು ಉರುಳಿದಂತೆ ಜಾತ್ರೆಗೆ ಕ್ರಮೇಣ ವಿವಿಧೆಡೆಯಿಂದ ಜಾನುವಾರುಗಳು ಬಂದು ಸೇರ ತೊಡಗಿದವು. ಜಿಲ್ಲೆಯಲ್ಲಿ ಮಾತ್ರವಲ್ಲದೇ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು, ಗೊರೂರು, ಕಟ್ಟಾಯ, ಮಲ್ಲಿಪಟ್ಟಣ, ಮಗ್ಗೆ ಹಾಗೂ ಮೈಸೂರು ಜಿಲ್ಲೆಯಿಂದಲೂ ಅಧಿಕ ಪ್ರಮಾಣದಲ್ಲಿ ಜಾನುವಾರುಗಳು ವ್ಯಾಪಾರಕ್ಕೆಂದು ಬರತೊಡಗಿದವು. ಅದಲ್ಲದೇ ಅಂಗಡಿ, ಹೊಟೇಲ್ ಗಳಿಗೂ ಯಾವದೇ ಸುಂಕ ವಿಧಿಸದೆ ಸಮಿತಿಯ ಸ್ವಂತ ವೆಚ್ಚದಲ್ಲಿ 15 ದಿನಗಳ ಕಾಲ ಜಾತ್ರಾ ಉತ್ಸವ ನಡೆಸುತಿತ್ತು.

ಜಾತ್ರೆಗಾಗಿ ಹಲವಾರು ಮಂದಿ ಶ್ರಮಿಸಿದ್ದು, ಶನಿವಾರಸಂತೆಯ ಮಾಜಿ ಪುರಸಭಾಧ್ಯಕ್ಷ ಬಿ. ಗಂಗಪ್ಪ ಕರ್ಕೆರ, ಶಾಂತವೀರಪ್ಪ, ಮಹಾಂತಪ್ಪ, ಚಂದ್ರೇಗೌಡ, ಕಿತ್ತೂರು ವೀರಪ್ಪ, ಹಂಡ್ಲಿಯ ಪುಟ್ಟಣ್ಣ ಮತ್ತಿತರರು ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸ್ಥಳೀಯ ಮಂಡಲ ಪಂಚಾಯಿತಿ ಮೂಲಕ ಜಾತ್ರೆ ನಡೆಸಿಕೊಂಡು ಬರಲಾಯಿತು.

ಮಹಿಳೆಯರು ಮನೆ ಬಳಕೆ ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಮುಗಿ ಬೀಳುವದು ಈ ಜಾತ್ರೆಯ ಮತ್ತೊಂದು ವಿಶೇಷ. ಮನೋರಂಜನೆಗಾಗಿ ಸರ್ಕಸ್, ತೂಗು ತೊಟ್ಟಿಲು, ಕೊಲಂಬಸ್, ಯಕ್ಷಿಣಿ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳಿದ್ದು, ಜಾತ್ರೆ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಆಕರ್ಷಿಸುತ್ತದೆ.

ಜಾತ್ರೆಯ ಮೊದಲ ದಿನ ಗುಡುಗಳಲೆ ಬಸವೇಶ್ವರ ದೇವಾಲಯದ ಬಸವಣ್ಣ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳ ವಾದ್ಯದೊಂದಿಗೆ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗುತ್ತದೆ. ಶನಿವಾರಸಂತೆಯ ಸಮೀಪದ ಹಾರಳ್ಳಿ ಗ್ರಾಮದ ರಾಜವಂಶದ ಪ್ರಮುಖರೊಬ್ಬರೂ ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಅವರ ಕುಟುಂಬದವರೂ ಜಾತ್ರಾ ಮೈದಾನದ ದೀಣೆ ಮೇಲೆ ಬಸವೇಶ್ವರ ದೇವರ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಈಗಲೂ ಜಾತ್ರಾ ಮೈದಾನದ ಎರಡು ಬದಿಯಲ್ಲಿ ಎರಡು ಬಸವೇಶ್ವರರ ಪುಟ್ಟ ಗುಡಿಗಳಿವೆ. ಜಾತ್ರಾ ಸಮಯದಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಹಂಡ್ಲಿ ಗ್ರಾಮ ಪಂಚಾಯಿತಿಯ ಜಾತ್ರಾ ಸಮಿತಿಯ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ 13 ದಿನಗಳ ಕಾಲ ಜಾತ್ರೆ ನಡೆಯುತ್ತದೆ.

- ನರೇಶ್