ಮಡಿಕೇರಿ, ಸೆ. 29: ವಿವಾದಕ್ಕೀಡಾಗಿ ಗೊಂದಲ ನಿರ್ಮಾಣವಾಗಿದ್ದ ಮೂರ್ನಾಡು ಬಳಿಯ ಹೊದ್ದೂರುವಿನ ಪಾಲೆಮಾಡುವಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮೀಸಲಾಗಿರುವ ಜಾಗದಲ್ಲಿ ತಾ. 30ರಿಂದ (ಇಂದಿನಿಂದ) ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.ಪಾಲೆಮಾಡುವಿನ ಸ.ನಂ. 167/1ಎದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆಂದು 12.70 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಾಗಕ್ಕೆ ಬೇಲಿ ಅಳವಡಿಸಲು ಕ್ರಿಕೆಟ್ ಸಂಸ್ಥೆ ಮುಂದಾದ ಸಂದರ್ಭ ಅಲ್ಲಿನ ನಿವಾಸಿಗಳು ಸ್ಮಶಾನಕ್ಕೆಂದು 2 ಎಕರೆಯಷ್ಟು ಜಾಗಕ್ಕೆ ಬೇಲಿ ಹಾಕಿಕೊಂಡಿದ್ದರು. ಈ ಸಂಬಂಧ ಸಂಸ್ಥೆಯವರು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಕಂದಾಯ ಅಧಿಕಾರಿಗಳು ಪೊಲೀಸರ ಸಮಕ್ಷಮದಲ್ಲಿ ವಿವಾದ ಇತ್ಯರ್ಥಪಡಿಸಿದ್ದರು. ಇದೀಗ ಇಂದಿನಿಂದ ನಿಗದಿತ ಜಾಗದ ಸುತ್ತಲೂ ಬೇಲಿ ಅಳವಡಿಸುವ ಕಾರ್ಯ ನಡೆಯಲಿದೆ. ಅದರೊಂದಿಗೆ ಸ್ಟೇಡಿಯಂ ನಿರ್ಮಾಣ ಕಾಮಗಾರಿ ಕೂಡ ಆರಂಭಗೊಳ್ಳಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜಿಲ್ಲೆಯ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು ರೂ. 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದೆ. ಕ್ರೀಡಾ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡಿರುವ ಕ್ರೀಡಾಂಗಣ ನಿರ್ಮಾಣವಾಗುತ್ತಿರುವದು ಹೆಮ್ಮೆಯ ವಿಚಾರವಾಗಿದ್ದು, ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.