ಸಿದ್ದಾಪುರ, ನ.11: ಕರ್ನಾಟಕ ಪ್ಲಾಂಟೇಶನ್ ವರ್ಕರ್ಸ್ ಫೆಡರೇಶನ್‍ನ ರಾಜ್ಯ ಮಹಾ ಸಮ್ಮೇಳನ ಸಿದ್ದಾಪುರದ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ತಾ. 12 ಹಾಗೂ 13 ರಂದು ನಡೆಯಲಿದೆ ಎಂದು ಫೆಡರೇಶನ್‍ನ ರಾಜ್ಯಾಧ್ಯಕ್ಷ ಎ.ಮಹದೇವ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನ ಜಿಲ್ಲೆಯಲ್ಲಿ ರೈತರು, ಕಾರ್ಮಿಕರು ಕಾಡಾನೆ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರಗಳು ಗಮನಹರಿಸುತ್ತಿಲ್ಲ. 5 ಎಕರೆ ಮೇಲ್ಪಟ್ಟ ಕಾಫಿ ತೋಟದವರು ಪ್ಲಾಂಟೇಶನ್ ಲೇಬರ್ ಆ್ಯಕ್ಟ್‍ಗೆ ಒಳಪಡುವದರಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಆದರೆ ಕೆಲವು ತೋಟದ ಮಾaಲೀಕರು ಯಾವದೆ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಅರೋಪಿಸಿದರು

ಕನಿಷ್ಟ ವೇತನ, ನೂತನ ಕಾಫಿ ಕಾಯ್ದೆ ಮುಂತಾದ ಪ್ರಮುಖ ವಿಷಯಗಳನ್ನು ರಾಜ್ಯ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತಿದ್ದು, ಅಖಿಲ ಭಾರತ ಪ್ಲ್ಲಾಂಟೆಶನ್ ಫೆಡರೇಶನ್ ಅಧ್ಯಕ್ಷ ಲಾಲಾಜಿ ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಧರ್ಮೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ತೋಟ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪ ಮಾತನಾಡಿ, ಕಾರ್ಮಿಕರ ಕನಿಷ್ಟ ವೇತನ ತಿಂಗಳಿಗೆ ರೂ. 18 ಸಾವಿರ ನಿಗದಿಪಡಿಸುವದು. ಕಾಡಾನೆ ಹಾವಳಿ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಿದ್ದು, ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಜಿಲ್ಲೆಯ ಬಹುತೇಕ ತೋಟಗಳಲ್ಲಿ ಸರಕಾರದ ನಿಯಮಗಳ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆಯೂ ಚರ್ಚಿಸಲಾಗುವದು ಎಂದರು.

ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ಪ್ರದೇಶದ ಕಾರ್ಮಿಕರು ಹೆಚ್ಚಾಗಿರುವದರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಸ್ಥಳೀಯರಿಗೂ ಕೆಲಸ ನೀಡಬೇಕು ಹಾಗೂ ಕನಿಷ್ಟ ವೇತನ, ನೂತನ ಕಾಫಿ ಕಾಯ್ದೆಯಲ್ಲಿ ಕೇವಲ 3 ಮಂದಿ ಕಾರ್ಮಿಕ ಪ್ರತಿನಿಧಿಗೆ ಅವಕಾಶ ಕಲ್ಪಿಸಿರುವ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತಿದ್ದು, ಕಾರ್ಮಿಕರು ಹೆಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.