ಮಡಿಕೇರಿ, ಸೆ.25 : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗುವ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಉಪ ನಿರ್ದೇಶಕರು ಸಾಕಷ್ಟು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿಯ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಅಂಗನವಾಡಿ ಕೇಂದ್ರಗಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸರಕಾರದ ಮೂಲಕ ಪೌಷ್ಠಿಕ ಆಹಾರವನ್ನು ವಿತರಿಸ ಲಾಗುತ್ತಿದ್ದು, ಇದರ ಖರೀದಿ ವ್ಯವಹಾರ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಆದೇಶ ವೊಂದನ್ನು ಮಾಡಿ ಆಹಾರ ಸಾಮಗ್ರಿಗಳನ್ನು ಜನತಾ ಬಜಾóರ್ ನಿಂದಲೇ ಖರೀದಿಸುವಂತೆ ತಿಳಿಸಿದ್ದಾರೆ.

ಜನತಾ ಬಜಾರ್‍ನಲ್ಲಿ ಕಮಿಷನ್ ಸಿಗದ ಕಾರಣ ಇಲ್ಲಿನ ಆಹಾರ ಸಾಮಾಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಪ್ರತಿಬಿಂಬಿಸಿ ಜಿಲ್ಲಾಡಳಿತದ ಹಾದಿ ತಪ್ಪಿಸುವ ಕೆಲಸವನ್ನು ಉಪನಿರ್ದೇಶಕರು ಮಾಡಿದ್ದಾರೆ ಎಂದು ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

ಸ್ವಸಹಾಯ ಸಂಘಗಳ ಹೆಸರಿನಲ್ಲಿ ಆಹಾರ ಸಾಮಗ್ರಿ ಖರೀದಿಸುವ ಮೂಲಕ ಚಾಣಾಕ್ಷತನ ಮೆರೆದಿರುವ ಉಪನಿರ್ದೇಶಕರು ಸಾಕಷ್ಟು ಅವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನಿಂದ ಬರುತ್ತಿರುವ ಆಹಾರ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಅಸಮಾಧಾನ ಜಿಲ್ಲಾ ವ್ಯಾಪಿ ವ್ಯಕ್ತವಾಗಿದೆ ಎಂದು ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ. ಸೋಮವಾರಪೇಟೆ ತಾ.ಪಂ. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಅವರಿಗೂ ಜಿಲ್ಲೆಯ ಅನೇಕ ಕಡೆಗಳಿಂದ ದೂರುಗಳು ಕೇಳಿ ಬಂದಿದ್ದು, ತಕ್ಷಣ ಪ್ರಬಾರ ಉಪನಿರ್ದೇಶಕರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಪ್ಪಿದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಪುಟಾಣಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನೀಡುತ್ತಿರುವ ಪೌಷ್ಠಿಕಾಂಶದ ಆಹಾರದಲ್ಲೂ ಅವ್ಯವಹಾರ ನಡೆಸುತ್ತಿರುವದು ಅತ್ಯಂತ ಖಂಡನೀಯವಾಗಿದ್ದು, ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಸುಬ್ರಮಣ್ಯ ಉಪಾಧ್ಯಾಯ ಒತ್ತಾಯಿಸಿದ್ದಾರೆ.