ಸೋಮವಾರಪೇಟೆ, ಜ. 8: ಹಾಕಿ ಕ್ರೀಡೆಗೆ ಕೊಡಗಿನಲ್ಲಿ ಹೆಚ್ಚಿನ ಒಲವು ಇರುವದರಿಂದ ಆಸ್ಟ್ರೋಟರ್ಫ್ ಕ್ರೀಡಾಂಗಣ ಅತ್ಯಗತ್ಯವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸೋಮವಾರಪೇಟೆಯಲ್ಲಿ ಸ್ಥಗಿತಗೊಂಡಿರುವ ಮೈದಾನವನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಇಲ್ಲಿನ ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಕಳೆದ ಮೂರು ದಿನಗಳಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವಿಠಲಾಚಾರ್ಯ ಸ್ಮಾರಕ ಜಿಲ್ಲಾ ಮಟ್ಟದ ಹಾಕಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೂ. 3.5ಕೋಟಿ ವೆಚ್ಚದ ಈ ಕ್ರೀಡಾಂಗಣಕ್ಕೆ ತಾಂತ್ರಿಕ ಅನುಮೋದನೆ ಮಾತ್ರ ಬಾಕಿ ಉಳಿದಿದ್ದು, ಶೀಘ್ರ ದಲ್ಲಿಯೇ ಕಾಮಗಾರಿ ಪ್ರಾರಂಭಿಸ ಲಾಗುವದು ಎಂದರು. ರಾಜ್ಯದಲ್ಲಿ ಯಾವದೇ

ಕ್ರೀಡಾಂಗಣದ ಕಾಮಗಾರಿ ಕಳಪೆಯಾಗದಂತೆ ಎಚ್ಚರಿಕೆ ವಹಿಸಲು ತಾಂತ್ರಿಕ ಸಲಹಾ ಸಮಿತಿಯನ್ನು ಇಲಾಖೆ ನೇಮಕ ಮಾಡಿದೆ. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವದು ಎಂದು ಹೇಳಿದರು.

ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯದಲ್ಲಿ ಅತ್ಯುತ್ತಮ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗು ವದು. ಮುಂದಿನ ಒಲಂಪಿಕ್ಸ್‍ನಲ್ಲಿ ಚಿನ್ನದ ಪದಕ ಪಡೆಯುವ ಕ್ರೀಡಾಪಟುವಿಗೆ ರೂ. 5 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ರೂ.3ಕೋಟಿ ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುವಿಗೆ ರೂ.2ಕೋಟಿ ನೀಡಲಾಗುವದು ಎಂದರು.

ಕ್ರೀಡೆಯ ತವರೂರಾದ ಕೊಡಗು ಜಿಲ್ಲೆಯ ಕ್ರೀಡಾ ಪಟುಗಳಿಗೆ ಹೆಚ್ಚಿನ ಅನುಕೂಲವಾಗುವ ದೃಷ್ಟಿಯಿಂದ ಮೈಸೂರಿನಲ್ಲಿ ಕ್ರೀಡಾ ಅಕಾಡೆಮಿ ಮತ್ತು ಕ್ರೀಡಾ ಶಾಲೆಯನ್ನು ಪ್ರಾರಂಭಿಸುವ ಉದ್ದೇಶವನ್ನು ಸರಕಾರ ಹೊಂದಿದ್ದು, ಅತ್ಯುತ್ತಮ ರಾಜ್ಯ ತಂಡವನ್ನು ಆಯ್ಕೆ ಮಾಡುವ ಸಂಪೂರ್ಣ ವಿಶ್ವಾಸ ಇದೆ ಎಂದರು. ಬೆಂಗಳೂರಿನ ಕ್ರೀಡಾ ಪ್ರಾಧಿಕಾರಕ್ಕೆ ಹೆಚ್ಚುವರಿಯಾಗಿ 10 ಎಕರೆ ಸ್ಥಳ ಒದಗಿಸುವ ಮೂಲಕ ಪಾಟಿಯಾಲ ದಲ್ಲಿರುವಂತಹ ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿ ಕೇಂದ್ರವನ್ನು ಒದಗಿಸುವ ಕುರಿತು ಈಗಾಗಲೇ ಕೇಂದ್ರ ಸಚಿವರಾದ ವಿಜಯ್ ಗೋಯೆಲ್ ಭರವಸೆ ನೀಡಿದ್ದಾರೆ. ರಾಜ್ಯ ಸರಕಾರವು ಇದಕ್ಕೆ ಸಂಪೂರ್ಣ ವಾಗಿ ಸ್ಪಂದಿಸಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇರುವದರಿಂದ ಕ್ರೀಡಾ ವಿಶ್ವವಿದ್ಯಾ ನಿಲಯ ಸ್ಥಾಪನೆಯಾಗ ಬೇಕು. ಕಳೆದ ಸರಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಕ್ರೀಡಾ ನೀತಿಯನ್ನು ಪೂರ್ಣಗೊಳಿಸ ಬೇಕೆಂದು ಮನವಿ ಮಾಡಿದರು.

ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಆಸ್ಟ್ರೋ ಟರ್ಫ್ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಬೇಕೆಂದು ಅಂತ ರಾಷ್ಟ್ರೀಯ ಹಾಕಿ ಆಟಗಾರ, ಭಾರತೀಯ ಹಾಕಿ ತಂಡದ ನಾಯಕ ಶ್ರೀಜೇಶ್, ಎಸ್.ವಿ. ಸುನಿಲ್, ವಿಕ್ರಂಕಾಂತ್, ವಿನಯ್ ಅವರುಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಎಚ್.ಎನ್. ಅಶೋಕ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ಎಸ್.ಎಲ್.ಎನ್. ಕಾಫಿ ಸಂಸ್ಥೆಯ ಮಾಲೀಕ ಸಾತಪ್ಪನ್, ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಕಾಳಯ್ಯ, ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ಎಸ್.ವಿ. ಸುನಿಲ್, ಪಿ.ಆರ್. ಶ್ರೀಜೇಶ್, ವಿಕ್ರಂ ಕಾಂತ್, ವಿ.ಎಸ್. ವಿನಯ್, ಹರಿಪ್ರಸಾದ್, ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಆರ್.ವಿ. ರಘುಪ್ರಸಾದ್, ವಿಶ್ವ ಒಕ್ಕಲಿಗ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.