ಶನಿವಾರಸಂತೆ, ಸೆ. 29: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಜೆ.ಆರ್. ವೀಣಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯ ಮೋಹನ್ ಕುಮಾರ್ ಮಾತನಾಡಿ, ಆಲೂರು-ಸಿದ್ದಾಪುರದ ಗಿರಿಜನ ಕಾಲೋನಿಯಲ್ಲಿ ನಿರ್ಮಿಸಿರುವ ಶೌಚಾಗೃಹದ ಕಾಮಗಾರಿಯಲ್ಲಿ ಕಳಪೆಯಾಗಿ ಶೇ. 90 ಭಾಗ ಪರಿಶಿಷ್ಟ ಪಂಗಡದ ಫಲಾನುಭವಿಗಳಾಗಿದ್ದು, ಶೌಚಾಲಯ ನಿರ್ಮಿಸಿಕೊಳ್ಳಲು ಅನೇಕ ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಲಾಗಿ ಜಾಗೃತಿ ಮೂಡಿಸುವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಯಶಸ್ವಿಯಾಗಿ ಸೋಮವಾರಪೇಟೆ ತಾಲೂಕಿನಲ್ಲಿ ಬಯಲು ಮುಕ್ತ ಶೌಚಾಲಯ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಹೆಗ್ಗಳಿಕೆಯನ್ನು ಸಹಿಸಿಕೊಳ್ಳದ ಗ್ರಾಮ ಪಂಚಾಯಿತಿಯ ಸದಸ್ಯರುಗಳಿಬ್ಬರು ರಾಜಕೀಯ ದುರುದ್ದೇಶದಿಂದ ಕಳಪೆ ಕಾಮಗಾರಿ ಎಂದು ಆರೋಪಿಸುವದು ಅವರ ಸ್ಥಾನಕ್ಕೆ ಸರಿಯಲ್ಲವೆಂದು ಸಮರ್ಥಿಸಿಕೊಂಡರು.
ಪಂಚಾಯಿತಿ ಅಧ್ಯಕ್ಷೆ ವೀಣಾ ಮಾತನಾಡಿ, ಶೌಚಾಲಯ ನಿರ್ಮಿಸಿಕೊಳ್ಳಲು ಫಲಾನುಭವಿಗಳೇ ಮುಂದೆ ಬಂದು ತಾವೇ ಕಾಮಗಾರಿಯನ್ನು ನಿರ್ವಹಿಸಿದ್ದು, ಯಾವದೇ ಗುತ್ತಿಗೆದಾರನು ಕೆಲಸ ನಿರ್ವಹಿಸಿಲ್ಲ. ಶೌಚಾಲಯಗಳನ್ನು ತಾನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರುಗಳು ಖುದ್ದಾಗಿ ಪರಿಶೀಲಿಸಿದ್ದು, ಯಾವದೇ ಕಳಪೆ ಕಾಮಗಾರಿ ನಡೆದಿಲ್ಲ ಎಂದು ಸದಸ್ಯರ ಗಮನಕ್ಕೆ ತಂದರು.
ಇದೇ ಸಂದರ್ಭ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಭೆಯಲ್ಲಿ ತಲಾ ರೂ. 15 ಸಾವಿರದ ಚೆಕ್ಗಳನ್ನು ನೀಡಲಾಯಿತು. ಪರಿಶಿಷ್ಟ ಪಂಗಡದವಳಾದ ತಾನು ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ತನ್ನನ್ನು ಕೆಲವು ಸದಸ್ಯರು ತಾತ್ಸಾರ ಭಾವನೆಯಿಂದ ನೋಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ. ಸತ್ಯ, ಸದಸ್ಯರುಗಳಾದ ಬಿ.ಡಿ. ಮೋಹನ್ ಕುಮಾರ್, ಕೆ.ಜಿ. ಮಂಜುನಾಥ್, ಕೆ.ಎಸ್. ಶಶಿಕಲಾ, ಎ.ಬಿ. ರಾಧ, ನಾಗಮ್ಮ, ಟಿ.ಪಿ. ವಿಜಯ, ಸರಸ್ವತಿ, ತಮ್ಮಯ್ಯ, ಚಂದ್ರಾವತಿ, ತೀರ್ಥಕುಮಾರ್, ಎಸ್.ಜೆ. ಪ್ರಸನ್ನ, ಹೆಚ್.ಸಿ. ಸುರೇಶ್, ರೇಣುಕಾ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎಂ. ಚಂದ್ರೇಗೌಡ ಸ್ವಾಗತಿಸಿ, ಇಂಜಿನಿಯರ್ ಬ್ರಹ್ಮಯ್ಯ ವಂದಿಸಿದರು.