ಮಡಿಕೇರಿ, ನ. 30 : ರೂ.500 ಹಾಗೂ 1000 ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ನಂತರದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಕೊಡಗಿನ ಕೃಷಿ ಕ್ಷೇತ್ರದ ಸ್ಥಿತಿ ಶೋಚನೀಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೋಟುಗಳ ಚಲಾವಣೆಯನ್ನು ರದ್ದು ಗೊಳಿಸಿರುವದು ಸ್ವಾಗತಾರ್ಹ ವಾದರೂ ಪೂರ್ವ ತಯಾರಿ ಇಲ್ಲದೆ ತೆಗೆದುಕೊಂಡ ನಿರ್ಧಾರದಿಂದಾಗಿ ಗ್ರಾಮೀಣ ಜನರು ಅತಂತ್ರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಆರೋಪಿಸಿದರು. ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಮತ್ತು ಭತ್ತದ ಕೃಷಿಕರು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಾಫಿ ಮತ್ತು ಭತ್ತದ ಫಸಲಿನ ಕೊಯ್ಲಿನ ಸಮಯ ಇದಾಗಿರುವದರಿಂದ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಸಂಬಳ ನೀಡಲು ಕೂಡ ಅಗತ್ಯವಿರುವಷ್ಟು ಹಣ ದೊರೆಯುತ್ತಿಲ್ಲ. ಅಲ್ಲದೆ ಕಾಫಿ ಕರಿಮೆಣಸನ್ನು ಮಾರಾಟ ಮಾಡುವ ಬೆಳೆಗಾರರಿಗೂ ಸಕಾಲದಲ್ಲಿ ವ್ಯಾಪಾರಿಗಳಿಂದ ಹಣ ದೊರೆಯದ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ತಕ್ಷಣ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರದೀಪ್ ಒತ್ತಾಯಿಸಿದರು.

ಮಾಜಿ ಸಂಸದ ಹೆಚ್. ವಿಶ್ವನಾಥ್ ವಿರುದ್ಧ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಮಾಡಿರುವ ವಾಗ್ದಾಳಿಯನ್ನು ಖಂಡಿಸಿದ

(ಮೊದಲ ಪುಟದಿಂದ) ಬಿ.ಟಿ. ಪ್ರದೀಪ್, ಒಬ್ಬ ಸಂಸದರಾಗಿ ವ್ಯಕ್ತಿ ನಿಂದನೆ ಮಾಡುವದು ಶೋಭೆ ತರುವ ವಿಚಾರವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ನಾಯಕತ್ವದ ಗುಣ ಹೊಂದಿರುವವರು ಸಂಯಮವನ್ನು ಕಾಯ್ದುಕೊಳ್ಳಬೇಕು. ಆದರೆ, ಪ್ರತಾಪ್ ಸಿಂಹ ಅವರು ಯುವ ಬಿಜೆಪಿ ರಾಜ್ಯಾಧ್ಯಕ್ಷ ಎನ್ನುವ ಕಾರಣಕ್ಕಾಗಿ ಉದ್ವೇಗದ ಮಾತುಗಳನ್ನಾಡುತ್ತಿದ್ದಾರೆ ಎಂದು ಬಿ.ಟಿ. ಪ್ರದೀಪ್ ಟೀಕಿಸಿದರು.

ಹೆಚ್.ವಿಶ್ವನಾಥ್ ಅವರು ಪ್ರಧಾನಿ ನರೇಂದ್ರಮೋದಿ ಅವರ ಬಗ್ಗೆ ಮಾಡಿರುವ ಟೀಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿ.ಟಿ.ಪ್ರದೀಪ್ ಕೇಂದ್ರ ಸರ್ಕಾರದಿಂದ ಕಾಫಿ ಬೆಳೆÉಗಾರರನ್ನು ತೆರಿಗೆ ವ್ಯಾಪ್ತಿಗೆ ತರುವ ಯತ್ನ ನಡೆಯುತ್ತಿದೆಯೆಂದು ಆರೋಪಿಸಿದರು. ಇಲ್ಲಿಯವರೆಗೆ ಕೃಷಿ ಕ್ಷೇತ್ರವನ್ನು ತೆರಿಗೆ ವ್ಯಾಪ್ತಿಗೆ ತಂದಿಲ್ಲ. ಆದರೆ, ಕಾಫಿ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ ಕಾಫಿ ಕಾಯ್ದೆಯ ನೆಪದಲ್ಲಿ ತೆರಿಗೆ ಹೊರೆ ಹಾಕುವ ಆತಂಕ ಎದುರಾಗಿದೆ. ಬೆಳೆಗಾರರು ನೋಂದಾವಣೆ ಮಾಡಿಕೊಳ್ಳುವ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಇದು ತೆರಿಗೆ ನಿಗದಿಗೆ ತೆಗೆದುಕೊಂಡ ಕ್ರಮವಾಗಿದೆಯೆಂದು ಅವರು ಟೀಕಿಸಿದರು.

ಅಧ್ಯಕ್ಷರನ್ನು ಡಮ್ಮಿಯನ್ನಾಗಿ ಮಾಡಲಾಗಿದ್ದು, ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಸಣ್ಣ ಬೆಳೆÉಗಾರರಿಗೆ ಕಡಿಮೆ ಪ್ರಾತಿನಿಧ್ಯವಿದೆ. ಕಾಫಿ ಕ್ಷೇತ್ರದಲ್ಲಿ ಕೊಡಗಿನ ಬೆಳೆಗಾರರು ಸಣ್ಣ ಹಲ್ಲರ್‍ಗಳನ್ನು ಅವಲಂಭಿಸಿದ್ದು, ಮಲ್ಟಿನ್ಯಾಷನಲ್ ಕ್ಯೂರರ್ಸ್ ಮತ್ತು ಸಣ್ಣ ಹಲ್ಲರ್ಸ್ ಸಂಸ್ಥೆಗಳ ನಡುವೆ ಪೈಪೋಟಿ ಇರುವ ಕಾರಣ ಬೆಳೆಗಾರರಿಗೆ ತಾವು ಬೆಳೆÉದ ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಆದರೆ, ನೂತನ ಕಾಯ್ದೆ ಜಾರಿಯಾದರೆ ಸಣ್ಣ ಹಲ್ಲರ್‍ಗಳು ಮುಚ್ಚಲ್ಪಡುವದರಿಂದ ಮಲ್ಟಿನ್ಯಾಷನಲ್ ಕ್ಯೂರರ್ಸ್ ನೀಡುವ ಅಲ್ಪ ಪ್ರಮಾಣದ ದರವನ್ನು ಬೆಳೆÉಗಾರರು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಬಿ.ಟಿ. ಪ್ರದೀಪ್ ಆತಂಕ ವ್ಯಕ್ತಪಡಿಸಿದರು.

ನೂತನ ಕಾಯ್ದೆಯಲ್ಲಿ ಹಲವು ಅಡ್ಡಿ ಆತಂಕಗಳು ಇರುವದರಿಂದ ಸಂಸದರು ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಕಾಫಿ ಬೆಳೆಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಸಂಸದರಾದ ಪ್ರತಾಪ ಸಿಂಹ ಯಾವದೇ ಕಾಳಜಿ ತೋರಿಲ್ಲವೆಂದು ಆರೋಪಿಸಿದರು. ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವದನ್ನು ಬಿಡದಿದ್ದಲ್ಲಿ ಕಾಂಗ್ರೆಸ್ ಕೂಡ ಅದೇ ರೀತಿಯ ಹೇಳಿಕೆಗಳನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಸದರು ಎಂಬ ಗೌರವವನ್ನು ಇಲ್ಲಿಯವರೆಗೆ ನೀಡಲಾಗಿದ್ದು, ವಿನಾ ಕಾರಣ ಕ್ಷುಲ್ಲಕ ರಾಜಕಾರಣ ಮಾಡಿದರೆ ಅದನ್ನು ಸಹಿಸಲು ಕಾಂಗ್ರೆಸ್ ತಯಾರಿಲ್ಲವೆಂದರು. ಸಂಸದ ಪ್ರತಾಪ್ ಸಿಂಹ ಅವರು ಸೋಮವಾರಪೇಟೆಗೆ ಭೇಟಿ ನೀಡಿ ಬೆಳೆಗಾರರ ಸಂಕಷ್ಟವನ್ನು ಅರಿಯುವ ಕೆಲಸವನ್ನು ಮಾಡಿಲ್ಲವೆಂದು ಲೋಕೇಶ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೆÉೀರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಪ್ರಮುಖರಾದ ಮೊಣ್ಣಪ್ಪ, ಚೇತನ್ ಹಾಗೂ ಎಂ.ಎ. ಉಸ್ಮಾನ್ ಉಪಸ್ಥಿತರಿದ್ದರು.