ವೀರಾಜಪೇಟೆ, ಜೂ. 19: ವೀರಾಜಪೇಟೆ ಬಳಿಯ ಆರ್ಜಿ ಗೋಮಾಳ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳಿಗೆ ನೀಡಿದ 24 ಏಕರೆ ಜಾಗದ ಮಂಜೂರಾತಿಗೆ ಪುರಸ್ಕರಿಸಿ ಆದೇಶ ನೀಡಿದೆ.
ಆರ್ಜಿ ಗೋಮಾಳದ ಸ.ನಂ. 315/1 ರಲ್ಲಿ ಗೋಮಾಳ ಸಂರಕ್ಷಣಾ ಸಮಿತಿಯು 89.5 ಏಕರೆ ಜಾಗ ಗೋಮಾಳಕ್ಕಾಗಿ ಮೀಸಲಿರಿಸಲಾಗಿದೆ. ಇದರಲ್ಲಿ 15 ವರ್ಷಗಳಿಂದ ಆಗಿಂದಾಗ್ಗೆ ವರ್ಗವಾಗಿ ಬರುತ್ತಿರುವ ಜಿಲ್ಲಾಧಿಕಾರಿಗಳು ಇದನ್ನು ಪೈಸಾರಿ ಜಾಗದಂತೆ ಪರಿಗಣಿಸಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡುತ್ತಿದ್ದರೆಂದು ಉಚ್ಛ ನ್ಯಾಯಾಲಯದಲ್ಲಿ ದೂರಿದ್ದರು.
ಗೋಮಾಳದ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ಜಾಗದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ 47 ಏಕರೆ 47 ಸೆಂಟುಗಳಷ್ಟು ಜಾಗ ಮಾತ್ರ ಗೋಮಾಳಕ್ಕೆ ಸೇರಿದ್ದಾಗಿದೆ. ಇತರ ಜಾಗ ಪೈಸಾರಿಗೆ ಸೇರಿದ್ದಾಗಿರುವದರಿಂದ ಜಿಲ್ಲಾಧಿಕಾರಿಗಳು ದಾಖಲೆ ಪ್ರಕಾರ ಮಂಜೂರು ಮಾಡಿರುವದಾಗಿ ಆದೇಶದಲ್ಲಿ ತಿಳಿಸಿದೆ. ಗೋಮಾಳ ಸಂರಕ್ಷಣಾ ಸಮಿತಿ ಪ್ರಕಾರ 89.5 ಏಕರೆ ಗೋಮಾಳದ ಜಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ, ಶಾಲೆ ಪೊಲೀಸ್ ನಕ್ಷಲ್ ನಿಗ್ರಹ ದಳ, ವಾಲ್ಮೀಕಿ ಭವನ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕ, ಇತರ 27 ಮಂದಿ ಮನೆ ಕಟ್ಟಿಕೊಂಡಿದ್ದಾರೆ ಎಂದು ಉಚ್ಛ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಇತ್ತೀಚೆಗೆ ಉಚ್ಛ ನ್ಯಾಯಾಲಯ ಜಿಲ್ಲಾಧಿಕಾರಿಯಿಂದ ಮಂಜೂರಾತಿಯಾದ 24 ಏಕರೆ ಜಾಗ ಹೊರತುಪಡಿಸಿದಂತೆ ಇನ್ನು ಯಾವದೇ ಜಾಗ ಮಂಜೂರು ಮಾಡದಂತೆ ತಡೆಯಾಜ್ಞೆ ನೀಡಿತ್ತು. ಈ ಜಾಗದಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ 15 ದಿನಗಳ ಹಿಂದೆ ಜಿಲ್ಲಾಧಿಕಾರಿಯು ತಾಲೂಕು ತಹಶೀಲ್ದಾರ್ ಮೂಲಕ ಆದೇಶ ನೀಡಿದ್ದರು.
ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ಗೋಮಾಳ ವಿವಾದದ ಅಂತಿಮ ವಿಚಾರಣೆಯಲ್ಲಿ ಜಿಲ್ಲಾಧಿಕಾರಿ, ತಾಲೂಕು ಕಚೇರಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ದಾಖಲೆಯನ್ನು ಪರಿಶೀಲಿಸಿ ಈಗ ನಿರ್ಮಾಣಗೊಂಡಿರುವ ಎಲ್ಲ ಕಟ್ಟಡಗಳು ದಾಖಲೆ ಪ್ರಕಾರ ಪೈಸಾರಿ ಜಾಗದಲ್ಲಿದೆ. ಆದ್ದರಿಂದ ಇದನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.
ಸರಕಾರ ಹಾಗೂ ಜಿಲ್ಲಾಧಿಕಾರಿ ಪರವಾಗಿ ಇಬ್ಬರು ವಕೀಲರುಗಳು, ವೀರಾಜಪೇಟೆ ಪಟ್ಟಣ ಪಂಚಾಯಿತಿ ಪರವಾಗಿ ಇಬ್ಬರು ಹಾಗೂ ಗೋಮಾಳ ಸಮಿತಿ ಪರವಾಗಿ ಒಬ್ಬರು ಉಚ್ಛ ನ್ಯಾಯಾಲಯದಲ್ಲಿ ವಾದಿಸಿದರು. ಇದರಿಂದ ಆರ್ಜಿ ಗೋಮಾಳ ಸಂರಕ್ಷಣಾ ಸಮಿತಿ ಹೋರಾಟಕ್ಕೆ ಹಿನ್ನಡೆ ಉಂಟಾಗಿದೆ. ಈ ಆದೇಶದ ವಿರುದ್ಧ ಗೋಮಾಳ ಸಮಿತಿಯು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಸಿದ್ಧತೆಯಲ್ಲಿದೆ. ಉಚ್ಛ ನ್ಯಾಯಾಲಯದ ಹೊಸ ಆದೇಶದಿಂದ ಆರ್ಜಿ ಗ್ರಾಮದ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವ 27 ಮಂದಿ ಜಾಗವನ್ನು ನ್ಯಾಯಾಲಯ ಪುರಸ್ಕರಿಸಿದಂತಾಗಿದೆ.