ಮಡಿಕೇರಿ, ಆ. 26 : ಬೆಟ್ಟಗೇರಿ ನಿವಾಸಿ ಚಳಿಯಂಡ ಉತ್ತಪ್ಪ (ನಂದ) ಅವರ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಬೆಟ್ಟಗೇರಿ ಯುವ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷÀ ಬೊಳ್ಳದಂಡ ಈ. ನಾಚಪ್ಪ (ನವೀನ್) ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ವಕೀಲ ಎ.ಕೆ. ಸುಬ್ಬಯ್ಯ ಅವರಂತಹ ಹಿರಿಯರು ನೋವಿನಲ್ಲಿರುವ ಮೃತ ಉತ್ತಪ್ಪ ಅವರ ಬಡ ಕುಟುಂಬದ ವಿಚಾರದಲ್ಲಿ ಇಲ್ಲ ಸಲ್ಲದ ಹೇಳಿಕೆಯನ್ನು ನೀಡಿರುವದು ಖಂಡನೀಯ, ಅದು ಅವರ ಹಿರಿತನಕ್ಕೆ ಅವಮಾನಕರವಾಗಿದೆ ಎಂದು ಆರೋಪಿಸಿದ್ದಾರೆ. ಉತ್ತಪ್ಪ ಅವರ ಮನೆಗೆ ಹೋಗುವ ದಾರಿಗೆ ಅಡ್ಡಲಾಗಿ ನೆಟ್ಟಿರುವ ಬಾಳೆ ಗಿಡ ಮತ್ತು ಬೇಲಿಯನ್ನು ಕಂದಾಯ ಇಲಾಖೆ ತಕ್ಷಣ ತೆರವು ಗೊಳಿಸಬೇಕು ಮತ್ತು ಪತ್ನಿ, ಮಕ್ಕಳಿಗೆ ಜಿಲ್ಲಾಡಳಿತ ನೆರವನ್ನು ಘೋಷಿಸಬೇಕು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.