ಮಡಿಕೇರಿ, ಆ. 24: ರಿಯೋದಲ್ಲಿ ಮುಕ್ತಾಯಗೊಂಡ 2016ರ ಒಲಂಪಿಕ್ಸ್‍ನಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗದ ಕುರಿತು ಬೇಸರ ವ್ಯಕ್ತಪಡಿಸಿರುವ, ಬ್ಯಾಡ್‍ಮಿಂಟನ್ ಡಬಲ್ಸ್‍ನಲ್ಲಿ ಜ್ವಾಲಾ ಗುಟ್ಟಾ ಅವರೊಂದಿಗೆ ದೇಶವನ್ನು ಪ್ರತಿನಿಧಿಸಿರುವ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಅವರು ಆರೋಗ್ಯ ಸುಧಾರಣೆ ಬಳಿಕ ಮುಂದಿನ ಪ್ರತಿಷ್ಠಿತ ಪಂದ್ಯಾಟಗಳಲ್ಲಿ ಇನ್ನಷ್ಟು ಸಾಧನೆ ತೋರಲು ಪ್ರಯತ್ನಿಸುವ ಗುರಿ ಹೊಂದಿರುವದಾಗಿ ತಿಳಿಸಿದ್ದಾರೆ.
ರಿಯೋದಿಂದ ತವರು ಜಿಲ್ಲೆ ಕೊಡಗಿಗೆ ಆಗಮಿಸಿರುವ ಈಕೆ ನಿನ್ನೆ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ವಿಶೇಷ ಪೂಜೆ - ಪ್ರಾರ್ಥನೆ ನೆರವೇರಿಸಿದರು. ಹಲವಾರು ಪ್ರಮುಖ ಕ್ರೀಡಾ ಕೂಟದಲ್ಲಿ ಅಶ್ವಿನಿ ಪಾಲ್ಗೊಂಡಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾಮನ್ ವೆಲ್ತ್ ಸೇರಿದಂತೆ ವಿಶ್ವ ಚಾಂಪಿಯನ್ ಶಿಪ್‍ನಲ್ಲೂ ಅಶ್ವಿನಿ ಪದಕಗಳಿಸಿದ್ದಾಳೆ.
ಈ ಬಾರಿ ಒಲಂಪಿಕ್ಸ್‍ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪ್ರಶಸ್ತಿಯ ಗುರಿ ಹೊಂದಿದ್ದರೂ ಇದಕ್ಕೆ ತೊಡಕಾದ ಕುರಿತು ಅಶ್ವಿನಿ ತಾಯಿ ಕಾವೇರಿ ಅವರೂ ಬೇಸರ ವ್ಯಕ್ತಪಡಿಸಿದ್ದಾರೆ. ರಿಯೋಗೆ ತೆರಳುವ ಒಂದು ತಿಂಗಳ ಮುಂಚೆ ಕೆನಡಾದಲ್ಲಿ ತರಬೇತಿ ಸಂದರ್ಭ ಅಶ್ವಿನಿಗೆ ಡೆಂಗಿ ಜ್ವರ ಕಾಣಿಸಿಕೊಂಡಿತ್ತು. ಇದು ಆಕೆಯ ಆಟಕ್ಕೆ ತೊಡಕಾಗಿದೆ.
2011ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕ ಗಳಿಸಿರುವದು ಅಶ್ವಿನಿಯ ಈ ತನಕದ ಉತ್ತಮ ಸಾಧನೆಯಾಗಿದ್ದು, ಒಲಂಪಿಕ್ಸ್‍ನ ಕನಸು ಇನ್ನೂ ಈಡೇರಿಲ್ಲ ಎಂದಿರುವ ಅವರು, ಇದೀಗ ಪುತ್ರಿ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ದಿನದಲ್ಲಿ ಹೆಚ್ಚಿನ ಸಾಧನೆ ತೋರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಶ್ವಿನಿ ಆರೋಗ್ಯ ಸುಧಾರಣೆಗಾಗಿ ನಿನ್ನೆ ತಾಯಿ ಕಾವೇರಿ ಹಾಗೂ ತಂದೆ ಪೊನ್ನಪ್ಪ ಅವರು ಪುತ್ರಿಯೊಂದಿಗೆ ಬಾಡಗರಕೇರಿಯ ಮೃತ್ಯುಂಜಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ಅಶ್ವಿನಿ ಸ್ಕೌಟ್ ಮತ್ತು ಗೈಡ್ಸ್‍ನಲ್ಲಿ ಕೊಡಗಿನಲ್ಲಿ ಗುರುತಿಸಿಕೊಂಡಿದ್ದ ದಿವಂಗತ ಕೋಟೆರ ಸೋಮಣ್ಣ ಅವರ ಮೊಮ್ಮಗಳಾಗಿದ್ದಾಳೆ.