*ಗೋಣಿಕೊಪ್ಪಲು, ಜು. 20: ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಔಷಧಿ, ವೈದ್ಯರ ಕೊರತೆ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನು ಪರಿಗಣಿಸಿ ಆರೋಗ್ಯ ಕೇಂದ್ರಕ್ಕೆ ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆಗಳ ಬಗ್ಗೆ ತಾಲೂಕು ವೈಧ್ಯಾಧಿಕಾರಿ ಡಾ. ಯತಿರಾಜ್ ಅವರಲ್ಲಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಆರೋಗ್ಯ ಕೇಂದ್ರದಲ್ಲಿ ವೈದÀ್ಯರು ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. ವಿನಾಕಾರಣ ಆರೋಗ್ಯ ಕೇಂದ್ರದಲ್ಲಿ ಔಷಧಿಗಳು ಇದ್ದರೂ ಮೆಡಿಕಲ್‍ಗಳಿಗೆ ಬರೆದುಕೊಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಶ್ ಅವರಲ್ಲಿ ಪ್ರಶ್ನಿಸಿ ಮುಂದೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದರು. ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ಆರೋಗ್ಯ ಸಚಿವರ ಕಾರ್ಯದರ್ಶಿಗಳಿಗೆ ಮತ್ತು ಶಾಸಕರಿಗೆ ದೂರು ನೀಡುವದಾಗಿ ತಿಳಿಸಿದರು. ರಕ್ಷಾ ಸಮಿತಿಯ ಸಭೆ ಕರೆದು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವದಾಗಿ ಈ ಸಂದರ್ಭ ಹೇಳಿದರು.

ಆರೋಗ್ಯ ಕೇಂದ್ರದಲ್ಲಿ ರೋಗಿ ಗಳಿಗೆ ಮಾಹಿತಿ ನೀಡಲು ನಾಮ ಫಲಕಗಳನ್ನು ಅಳವಡಿಸು ವಂತೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಅಳವಡಿಸುವಂತೆ ಸೂಚಿಸಲಾಯಿತು.

ಆಸ್ಪತ್ರೆಯ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಯಿಂದ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಾಹಿತಿ ನೀಡಿ ವಾಹನ ನಿಲುಗಡೆ ನಿಷೇಧ ನಾಮ ಫಲಕವನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಕೇಂದ್ರದಲ್ಲಿರುವ ಉದ್ಯಾನವನವನ್ನು ಪುನಶ್ಚೇತನ ಗೊಳಿಸಲು ವಾಹನ ಚಾಲಕರ ಸಂಘಕ್ಕೆ ನೀಡಬೇಕು. ಉದ್ಯಾನವನದ ಪೋಷಣೆ ಜವಾಬ್ದಾರಿ ಹೊತ್ತ ಲಯನ್ಸ್ ಕ್ಲಬ್ ನಿರ್ಲಕ್ಷ್ಯ ತಾಳುತ್ತಿದೆ. ಚಾಲಕರ ಸಂಘಕ್ಕೆ ನೀಡಿದರೆ ಉದ್ಯಾನವನ ಮತ್ತಷ್ಟು ಪೋಷಿಸಿ ಬೆಳೆಸುವದಾಗಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ವೈದ್ಯಾಧಿಕಾರಿ ಡಾ. ಯತಿರಾಜ್ ಅವರಲ್ಲಿ ಮನವಿ ಇಟ್ಟರು.

ಔಷಧಿ ಉಗ್ರಾಣದಲ್ಲಿ 185ಕ್ಕೂ ಹೆಚ್ಚು ಔಷಧಿಗಳ ಸಂಗ್ರಹವಿದೆ. ಆದರೂ ರೋಗಿಗಳಿಗೆ ಅದನ್ನು ವಿತರಿಸದೆ ಹೊರಗಿನ ಮೆಡಿಕಲ್‍ಗಳಿಗೆ ಬರೆದುಕೊಡುತ್ತಿದ್ದಾರೆ. ಇದರಿಂದ ಬಡರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ವೈದ್ಯರು ಈ ರೀತಿ ವರ್ತಿಸದೆ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ವೈದÀ್ಯರಿಗೆ ತಿಳಿಸಿದರು. ತಾ.ಪಂ. ಸದಸ್ಯ ಜಯಾ ಪೂವಯ್ಯ ಹಾಜರಿದ್ದರು.