ಕಾಯಿಲೆಗಳು ಹೇಗೆ ಮತ್ತು ಯಾವಾಗ ಬರುತ್ತವೆ ಎಂಬದು ಗೊತ್ತಾಗದ ಸ್ಥಿತಿಗೆ ಮನುಷ್ಯ ಬಂದು ನಿಂತಿದ್ದಾನೆ. ಆರೋಗ್ಯವಾಗಿದ್ದವರು ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರುತ್ತಾರೆ. ಅಲ್ಲಿ ಹಲವು ಪರೀಕ್ಷೆಗಳಿಗೊಳಪಟ್ಟಾಗ ಇನ್ನೊಂದಷ್ಟು ಕಾಯಿಲೆಗಳಿರುವದು ತಿಳಿಯುತ್ತದೆ.
ಆರೋಗ್ಯವಾಗಿರುವಾಗ ನಾವ್ಯಾರು ಆಸ್ಪತ್ರೆಯತ್ತ ಮುಖ ಮಾಡುವದಿಲ್ಲ, ವೈದ್ಯರನ್ನು ಕಾಣುವದಿಲ್ಲ. ಏನಾದರೂ ಚಿಕ್ಕಪುಟ್ಟ ನೋವು, ಜ್ವರ, ಶೀತ ಕಾಣಿಸಿಕೊಂಡಾಗಲೂ ಯಾವದಾದರೂ ಮಾತ್ರೆ ಸೇವಿಸಿ ಸುಮ್ಮನಾಗಿ ಬಿಡುತ್ತೇವೆ. ಕಾಯಿಲೆ ಉಲ್ಭಣಿಸಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ಮಾತ್ರ ಆಸ್ಪತ್ರೆಯತ್ತ ತೆರಳುತ್ತೇವೆ. ಆ ವೇಳೆಗೆ ನಮ್ಮನ್ನು ಆವರಿಸಿದ ಕಾಯಿಲೆ ಅಂತಿಮ ಘಟ್ಟಕ್ಕೆ ಬಂದು ತಲಪಿರುತ್ತದೆ.
ಮೊದಲೆಲ್ಲ ಜ್ವರ ಬಂದಾಗ ಯಾವದೋ ಒಂದು ಕಷಾಯ ಕುಡಿದರೆ, ಮಾತ್ರೆ ನುಂಗಿದರೆ ಹೋಗಿ ಬಿಡುತಿತ್ತು. ಈಗಲೂ ಹಾಗೆಯೇ ಮಾಡಲು ಹೋದರೆ ಕೆಲವು ಅನಾಹುತ ಆಗಿ ಬಿಡುವದು ಇದೆ. ಕಾರಣ ಇವತ್ತು ಡೆಂಗ್ಯೂ, ಚಿಕೂನ್ ಗುನ್ಯಾದಂತಹ ರೋಗಗಳ ವೈರಸ್ಗಳು ಸೊಳ್ಳೆಗಳ ಮೂಲಕ ಮನುಷ್ಯನ ದೇಹವನ್ನು ಹೊಕ್ಕಿ ಸಾವನ್ನು ತರುತ್ತಿವೆ. ಹೀಗಾಗಿ ಮಾತ್ರೆ ತೆಗೆದುಕೊಂಡರೆ ಹೋಗುತ್ತದೆ ಎಂಬ ಲಘುವಾದ ಮಾತನ್ನು ಬಿಟ್ಟು, ಜತೆಗೆ ಸ್ವಯಂ ಔಷಧಿ ತೆಗೆದುಕೊಳ್ಳುವದನ್ನು ದೂರ ಮಾಡಿ ತಕ್ಷಣ ಆಸ್ಪತ್ರೆಗೆ ಹೋಗುವದು ಒಳಿತು.
ಬಹಳಷ್ಟು ಜನರ ದೇಹದಲ್ಲಿರುವ ಕಾಯಿಲೆಗಳು ಗೊತ್ತೇ ಆಗುವದಿಲ್ಲ. ಅವರಿಗೆ ಕಾಯಿಲೆಯ ಲಕ್ಷಣವಾಗಿ ಚಿಕ್ಕಪುಟ್ಟ ತೊಂದರೆ ಕಾಣಿಸಿಕೊಂಡರೂ ಅವರು ತಲೆಕೆಡಿಸಿಕೊಳ್ಳುವದಿಲ್ಲ. ಅದಕ್ಕೆ ತಕ್ಕ ಮಾತ್ರೆ ತೆಗೆದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಹೆಚ್ಚಿನವರಿಗೆ ತಮಗೆ ಅಂಟಿರುವ ಕಾಯಿಲೆ ವಾಸಿ ಮಾಡದಷ್ಟರ ಮಟ್ಟಿಗೆ ಉಲ್ಭಣವಾಗಿದೆ ಎಂಬದೇ ಗೊತ್ತಾಗುವದಿಲ್ಲ. ಯಾವದೋ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಟ್ಟಾಗ ಮಾತ್ರ ಅರಿವಿಗೆ ಬರುತ್ತದೆ. ಆದರೆ ಅಷ್ಟರಲ್ಲಿ ಕಾಲವೂ ಕಳೆದು ಹೋಗಿರುತ್ತದೆ.
ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಂಡು ಬಂದಾಗಲೆಲ್ಲಾ ಮಾತ್ರೆ ಸೇವಿಸುವವರು ಇದ್ದಾರೆ. ಇದೊಂದು ರೀತಿಯ ಕೆಟ್ಟ ಅಭ್ಯಾಸ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆಯಾಗುವದಲ್ಲದೆ, ಕಿಡ್ನಿಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಯಾವದೇ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ಸೇವಿಸುವದು ಒಳ್ಳೆಯದಲ್ಲ. ಇದು ತಾತ್ಕಾಲಿಕ ಶಮನಕಾರಿಯಾದರೂ ಅದರಿಂದ ತೊಂದರೆ ತಪ್ಪಿದಲ್ಲ.
ಇನ್ನು ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರ ಬಳಿ ಹೋಗುವದಕ್ಕಿಂತ ಹೆಚ್ಚಾಗಿ ಪಕ್ಕದವರ ಸಲಹೆ ಕೇಳುವ ಚಟ. ಅವರು ಹೇಳುವ ಮಾತುಗಳಿಗೆ ಕಟ್ಟು ಬಿದ್ದು ಯಾವದೋ ಮಾತ್ರೆ ಸೇವಿಸುತ್ತಾರೆ. ಇದು ಬಹಳಷ್ಟು ಅಪಾಯಕಾರಿ. ಕಾಯಿಲೆಗಳು ಕಾಣಿಸಿಕೊಂಡಾಗ ಅವರಿವರಿಗೆ ಹೇಳಿ ಅವರಿಂದ ಬರುವ ನೂರಾರು ಸಲಹೆಗಳು, ಅದಕ್ಕಿಂತ ಹೆಚ್ಚಾಗಿ ಭಯ ಹುಟ್ಟಿಸುವ ಮಾತುಗಳಿಂದ ಆತಂಕ ಪಡುವ ಬದಲು ತಮ್ಮ ತೊಂದರೆಯನ್ನು ವೈದ್ಯರ ಬಳಿ ತಿಳಿಸಿ ಚಿಕಿತ್ಸೆ ಪಡೆಯುವದು ಒಳ್ಳೆಯದು.
ನಮ್ಮಲ್ಲಿ ಇವತ್ತು ಹೆಚ್ಚಿನ ಜನ ಒಂದಲ್ಲ ಒಂದು ಕಾರಣದಿಂದ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಹಣ ಸಂಪಾದನೆ ಮಾಡಬೇಕೆಂಬ ಹಠಕ್ಕೆ ಬಿದ್ದು ಇಲ್ಲಸಲ್ಲದ ಒತ್ತಡಗಳನ್ನು ಮೈಮೇಲೆ ಎಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ದೈಹಿಕ ಶ್ರಮವನ್ನು ನಾವು ಒಂದಷ್ಟು ವಿಶ್ರಾಂತಿ ಪಡೆದುಕೊಂಡು ಶಮನಗೊಳಿಸಬಹುದು. ಆದರೆ ಮಾನಸಿಕ ಶ್ರಮ ಹಾಗಲ್ಲ, ಅದು ಸದಾ ನೆಮ್ಮದಿಯನ್ನು ಬಯಸುತ್ತದೆ. ಜತೆಗೆ ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.
ನಾವು ಏನೇ ಮಾಡಬೇಕೆಂದು ಹೊರಟರೂ ಅದು ಮಾಡಲು ಸಾಧ್ಯವಾಗುವದು ಆರೋಗ್ಯ ಇದ್ದರೆ ಮಾತ್ರ. ಆದ್ದರಿಂದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಒತ್ತಡದ ಕೆಲಸದ ನಡುವೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿನ್ನೆಯಂತೆ ಇವತ್ತು ಇರುತ್ತದೆ ಎನ್ನಲಾಗದು. ಹಾಗೆಯೇ ಇವತ್ತಿನಂತೆ ನಾಳೆಯೂ ಇರದು. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾ ಒಂದಷ್ಟು ಎಚ್ಚರಿಕೆಯಿಂದ ಬದುಕನ್ನು ಮುನ್ನಡೆಸಿದರೆ ಒಳ್ಳೆಯದು.
- ಬಿ.ಎಂ. ಲವ ಕುಮಾರ್