ಕುಶಾಲನಗರ, ಆ. 26: ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಆಮ್ನೆಸ್ಟಿ ಸಂಸ್ಥೆಗೆ ನಿಷೇಧ ಹೇರಬೇಕೆಂದು ಆಗ್ರಹಿಸಿ ರಾಜ್ಯ ಸರಕಾರದ ವಿರುದ್ಧ ಕುಶಾಲನಗರ ಬಿಜೆಪಿ ಘಟಕದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಗಣಪತಿ ದೇವಾಲಯದ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಆಮ್ನೆಸ್ಟಿ ಸಂಸ್ಥೆ ಪರ ಹೇಳಿಕೆ ನೀಡಿದ ಗೃಹಮಂತ್ರಿ ಪರಮೇಶ್ವರ್ ತಕ್ಷಣ ರಾಜೀನಾಮೆ ನೀಡಬೇಕು, ಸೈನಿಕರ ವಿರುದ್ಧ ಘೋಷಣೆ ಕೂಗಿದ ಕಿಡಿಗೇಡಿಗಳು ಹಾಗೂ ಎಬಿಪಿವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಪ್ರತಿಭಟನಾ ಕಾರರು ಘೋಷಣೆ ಕೂಗಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಆಮ್ನೆಸ್ಟಿ ಸಂಸ್ಥೆ ಸಂವಾದದ ಹೆಸರಿನಲ್ಲಿ ಸೈನಿಕರಿಗೆ ಅಪಮಾನ ಎಸಗಿದೆ. ಇದರ ವಿರೋಧ ವಿರುದ್ಧ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನವೀಯ ವಾಗಿ ವರ್ತಿಸಿದ್ದಾರೆ. ಇದು ಖಂಡನೀಯ ಎಂದ ಅವರು ಕೂಡಲೆ ಆಮ್ನೆಸ್ಟಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸೋಮವಾರಪೇಟೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ಮಾತನಾಡಿ, ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವ ಆಮ್ನೆಸ್ಟಿ ಸಂಸ್ಥೆಯನ್ನು ನಿಷೇಧಿಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕರೆಯಂತೆ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭ ನಾಡ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಕ್ರಮಕ್ಕೆ ಆಗ್ರಹಿಸಿ ಕಂದಾಯ ನಿರೀಕ್ಷಕ ನಂದಕುಮಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್, ಬಿಜೆಪಿ ನಗರ ಘಟಕದ ಕಾರ್ಯದರ್ಶಿ ಹೆಚ್.ಡಿ. ಶಿವಾಜಿ, ಯುವಮೋರ್ಚಾ ಅಧ್ಯಕ್ಷ ಡಿ.ಕೆ.ಚಂದ್ರಶೇಖರ್, ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜ್, ಕುಶಾಲನಗರ ಪ. ಪಂ. ಸದಸ್ಯರಾದ ಮಧುಸೂದನ್, ರೇಣುಕಾ, ರಶ್ಮಿ ಅಮೃತ್‍ರಾಜ್, ಪ್ರಮುಖರಾದ ವಿ.ಎನ್. ವಸಂತ ಕುಮಾರ್, ಕುಮಾರಪ್ಪ, ಭಾಸ್ಕರ್ ನಾಯಕ್ ಮತ್ತಿತರರು ಇದ್ದರು.