* ಸಿದ್ದಾಪುರ, ಆ. 9: ಆಹಾರವನ್ನರಸುತ್ತಾ ಬಂದ ಕಾಡಾನೆಯೊಂದು ತಳ್ಳಿ ಬೀಳಿಸಿದ ಮರವೊಂದು ವಾಸದ ಮನೆಯ ಮೇಲೆ ಬಿದ್ದು ನಷ್ಟ ಸಂಭವಿಸಿರುವ ಘಟನೆ ನಡೆದಿದೆ.

ಇಲ್ಲಿಗೆ ಸಮೀಪದ ವಾಲ್ನೂರು - ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಕೃಷ್ಣಾಪುರ ಗ್ರಾಮದ ಕುಂಬಾರಕೆರೆ ಎಂಬಲ್ಲಿನ ನಿವಾಸಿ, ವಿಶ್ವನಾಥ ಹಾಗೂ ಪ್ರೇಮ ದಂಪತಿಯರ ವಾಸದ ಮನೆಯ ಬಳಿಯಿದ್ದ ಬೈನೆ ಮರವನ್ನು ನಿನ್ನೆ ರಾತ್ರಿ ಕಾಡಾನೆಯೊಂದು ಆಹಾರಕ್ಕಾಗಿ ತಳ್ಳಿ ಬೀಳಿಸಿದೆ. ದುರದೃಷ್ಟವಶಾತ್ ಮರ ವಿಶ್ವನಾಥ ಅವರ ಮನೆಯ ಮೇಲೆ ಬಿದ್ದಿದೆ. ಮನೆ ಜಖಂಗೊಂಡಿದ್ದು, ಮನೆಯೊಳಗೆ ಮಲಗಿದ್ದ ವಿಶ್ವನಾಥ್ ದಂಪತಿಯರು ಹಾಗೂ ಇಬ್ಬರೂ ಮಕ್ಕಳು ಮತ್ತು ವೃದ್ಧೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಇಂದು ಗ್ರಾ.ಪಂ. ಅಧ್ಯಕ್ಷೆ ನಾಗರತ್ನ, ಜಿ.ಪಂ. ಸದಸ್ಯೆ ಸುನಿತಾ, ಬಿಜೆಪಿ ಅಧ್ಯಕ್ಷ ಮಿಥುನ್ ನಾರಾಯಣ, ಗ್ರಾ.ಪಂ. ಮಾಜಿ ಸದಸ್ಯ ಹನೀಫ್ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ನಡೆದ ಬಗ್ಗೆ ಮಾಹಿತಿ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಮಿಥುನ್ ಈ ವಿಭಾಗದಲ್ಲಿ ಕಾಡಾನೆಗಳ ಹಾವಳಿ ಅತಿಯಾಗಿದ್ದರೂ ಇಲಾಖೆ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾಡಾನೆಗಳನ್ನು ಕಾಡಿಗಟ್ಟುವದರೊಂದಿಗೆ ನಷ್ಟಕ್ಕೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. - ಸುಧಿ