ಸೋಮವಾರಪೇಟೆ, ಜು. 21: ಆಧ್ಯಾತ್ಮಿಕ ತಳಹದಿಯ ಮೇಲೆ ವ್ಯಸನಮುಕ್ತ ಸಮಾಜದ ನಿರ್ಮಾಣ ಅಗತ್ಯವಾಗಿದೆ ಎಂದು ಚಿತ್ರದುರ್ಗ ಬೃಹನ್ ಮಠದ ಮಠಾಧೀಶರಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಆಶಯ ವ್ಯಕ್ತಪಡಿಸಿದರು.
ಬಸವ ಕೇಂದ್ರ, ಶ್ರೀ ಮುರುಘಾ ಮಠ ಇದರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಬೇಳೂರು ಮಠದ ಆವರಣದಲ್ಲಿ ನಡೆಯುತ್ತಿರುವ ಧಾರ್ಮಿಕರು ಮತ್ತು ಪರಮಾರ್ಥ ಸಾಧಕರಿಗಾಗಿ ಚಿಂತನಾ ಕಾರ್ಯಾಗಾರದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಇಂದು ಸಮಾಜ, ಸಾರ್ವಜನಿಕರು ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಾಗಿದೆ. ಇದರಿಂದಾಗಿ ಹಲವು ಮಂದಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ಸಮಾಜದಲ್ಲಿ ಯುವಕ ರಾದಿಯಾಗಿ ವ್ಯಸನಿಗಳಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ವಿಷಾಧಿಸಿದ ಅವರು, ಆಧ್ಯಾತ್ಮಿಕತೆಯ ತಳಹದಿಯ ಮೇಲೆ ವ್ಯಸನ ಮುಕ್ತ ಸಮಾಜದ ನಿರ್ಮಾಣ ಅಗತ್ಯವಾಗಿದೆ. ಇದಕ್ಕೆ ಧಾರ್ಮಿಕರು, ಸತ್ಚಿಂತನೆಯ ಮೂಲಕ ಮಾರ್ಗದರ್ಶನ ನೀಡು ವಂತಾಗಲಿ ಎಂಬ ಸದುದ್ದೇಶದಿಂದ ಈ ಚಿಂತನಾ ಕಾರ್ಯಾಗಾರ ಆಯೋಜಿಸಲಾಗಿದೆ. ಇದು ಸಮಕಾಲೀನ, ವೈಜ್ಞಾನಿಕ, ಪ್ರಗತಿಪರ ಕಾರ್ಯಾಗಾರವಾಗಿದೆ ಎಂದರು.
ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮರೆಯಾಗುತ್ತಿದ್ದು, ಗುರುಚಿಂತನೆ, ಗುರುಗಳ ಮಾರ್ಗದರ್ಶನದಲ್ಲಿ ಸಾಮರಸ್ಯ ತುಂಬಿದ ಸ್ವಸ್ಥ ಸಮಾಜ ನಿರ್ಮಾಣ ವಾಗಲಿ ಎಂದು ಆಶಿಸಿದರು. ಹೊಸದುರ್ಗದ ತತ್ವ ಪ್ರಸಾರಕರಾದ ಎಸ್. ಶಿವಲಿಂಗಮೂರ್ತಿ ಅವರು ‘ಮುದ್ರೆಗಳು ಮತ್ತು ಅವುಗಳ ಮಹತ್ವ’ ಕುರಿತ ವಿಷಯ ಮಂಡನೆ ಮಾಡಿ ಆರೋಗ್ಯ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಿಶ್ಲೇಷಿಸಿದರು. ಯೋಗ ಮಾನವನ ಅವಿಭಾಜ್ಯ ಅಂಗವಾಗ ಬೇಕು. ಆಗ ಎಲ್ಲರೂ ಆರೋಗ್ಯ ವಂತರಾಗಬಹುದು. ಅಂಗೈಯಲ್ಲೇ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು. ಅದಕ್ಕೆ ಸಾಧನೆ ಮುಖ್ಯ. ನಮ್ಮ ಕೈ ಬೆರಳುಗಳಲ್ಲಿ ಅಗ್ನಿ, ವಾಯು, ಆಕಾಶ, ಭೂಮಿ, ಜಲ ಎಂಬ ಮುದ್ರೆಗಳಿದ್ದು ಒಂದಕ್ಕೊಂದು ಪರಸ್ಪರ ಸ್ಪರ್ಶಿಸಿದಾಗ ಒಂದೊಂದು ಯೋಗಾನುಭವ ಉಂಟಾಗಲಿದೆ. ಯೋಗ ಮುದ್ರೆ ಅನಂತವಾದದ್ದು ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಯರ್ನಾಳು ವಿರಕ್ತ ಮಠಾಧೀಶರಾದ ಸಂಗನ ಬಸವ ಸ್ವಾಮೀಜಿ, ನವಲಗುಂದ ಮಠಾಧೀಶ ಬಸವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.