ನಾಪೋಕ್ಲು, ಜ. 31: ದೇಶದ ಮೇಲೆ, ನಮ್ಮ ಸಂಸ್ಕøತಿ ಮೇಲೆ, ಧಾರ್ಮಿಕ ಶ್ರದ್ಧಾಕೇಂದ್ರದ ಮೇಲೆ ಸಾಕಷ್ಟು ಭಾರೀ ಆಕ್ರಮಣಗಳು, ಹೋರಾಟಗಳು ನಡೆದಿವೆ. ಆದರೆ ಇದರಿಂದ ಭಾರತೀಯರಾದ ನಾವು ಯಾವತ್ತು ದೃತಿಗೆಟ್ಟಿಲ್ಲ. ಧರ್ಮ, ಸಂಸ್ಕøತಿ ಉಳಿವಿಗಾಗಿ ಒಂದು ಕಡೆಯಿಂದ ಹೋರಾಟ ಮಾಡಿದ್ದೇವೆ. ಅಂದಿನ ಆಧ್ಯಾತ್ಮಿಕ ಹಸಿವಿನಿಂದ ಧಾರ್ಮಿಕ ಚೌಕಟ್ಟು ಇಂದು ಗಟ್ಟಿಯಾಗಿದೆ. ಜಗತ್ತಿನಲ್ಲಿ ಎಲ್ಲ ವಿಚಾರಕ್ಕೂ ಕೊನೆ ಎಂಬದು ಇದೆ. ಆದರೆ ಆಧ್ಯಾತ್ಮಿಕಕ್ಕೆ ಕೊನೆ ಎಂಬದು ಇಲ್ಲ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನವೀಕರಣ ಪುನರ್‍ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಧಾರ್ಮಿಕ ಉಪನ್ಯಾಸವನ್ನು ಉಪನ್ಯಾಸಕ ಶ್ರೀಷಕುಮಾರ್ ನೀಡಿ, ದೇವಸ್ಥಾನಗಳು ಮನುಷ್ಯನು ನೆಮ್ಮದಿಯನ್ನು ಅನುಭವಿಸುವ ಶ್ರದ್ಧಾಕೇಂದ್ರಗಳು. ಇಲ್ಲಿ ಯಾವತ್ತೂ ರಾಜಕೀಯ ಗಾಳಿಗಳು ಬರ ಬಾರದು. ನಾವು ಎಲ್ಲಿ ಚಪ್ಪಲಿ ಇಡುತ್ತೇವೆಯೋ ಅಲ್ಲೇ ನಮ್ಮ-ನಮ್ಮ ರಾಜಕೀಯವನ್ನು ಬಿಟ್ಟು ಬರಬೇಕು. ಧರ್ಮ ಮತ್ತು ಧಾರ್ಮಿಕ ಕೇಂದ್ರಗಳು ಜತೆಯಲ್ಲೆ ಸಾಗುವ ಚೌಕಟ್ಟು. ಈ ನೆಲೆಯಲ್ಲಿ ನಮ್ಮ ಪವಿತ್ರ ಗ್ರಂಥವಾದ ಭಗವದ್ಗೀತೆ ಪ್ರತಿ ಮನೆಗಳ ದೇವರ ಕೋಣೆಯಲ್ಲಿ ಇರುವಂತಾಗುವಲ್ಲಿ ಮುಂದಿನ ದೃಢ ಕಲಶದೊಳಗೆ ಆಂದೋಲನಗಳಾಗಬೇಕು. ಇದರಿಂದ ಪ್ರತಿಯೊಬ್ಬನನ್ನು ಶ್ರೀ ಕೃಷ್ಣ ರಕ್ಷಿಸುತ್ತಾನೆ. ಜತೆಯಲ್ಲಿ ಪ್ರತಿ ಮನೆ ಮನಗಳಲ್ಲಿ ಧರ್ಮ ಜಾಗೃತಿಗೊಳ್ಳುತ್ತದೆ ಎಂದರು.

ಅಧ್ಯಕ್ಷತೆಯನ್ನು ದೇವತಕ್ಕರು ರಾಜಗೋಪಾಲ ರಾಮಕಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ಸುಳ್ಯ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ವೆಂಕಪ್ಪಗೌಡ, ಮಾಜಿ ಮೊಕ್ತೇಸರ ಸುರೇಶ್ ಪೆರುಮುಂಡ, ತಕ್ಕಮುಖ್ಯಸ್ಥ ಪುರುಷೋತ್ತಮ ನಿಡ್ಯಮಲೆ ಭಾಗವಹಿಸಿದರು. ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ, ಕಾರ್ಯದರ್ಶಿ ವಿಶ್ವನಾಥ ಕುಂಬಳಚೇರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆರ್.ಡಿ. ಆನಂದ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಿಡ್ಯಮಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ಬಂಗಾರಕೋಡಿ, ಕಾರ್ಯದರ್ಶಿ ತಿಲೋತ್ತಮ ಅಡ್ಕ, ಆರ್ಥಿಕ ಸಮಿತಿ ಕಾರ್ಯದರ್ಶಿ ಎ.ಎಸ್. ತೇಜಪ್ರಸಾದ್, ಕೋಶಾಧಿಕಾರಿ ಹರಿಶ್ಚಂದ್ರ ಮುಡ್ಕಜೆ, ಸಭಾ ಕಾರ್ಯಕ್ರಮ ಸಮಿತಿಯ ಸಂಚಾಲಕ ಪುರುಷೋತ್ತಮ ಕಿರ್ಲಾಯ, ದೇವತಕ್ಕ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು. ಜಿತೇಂದ್ರ ನಿಡ್ಯಮಲೆ ಸ್ವಾಗತಿಸಿ, ಮೋನಪ್ಪ ಮಾಸ್ತರ್ ಕುಂಬಚೇರಿ ವಂದಿಸಿದರು. ಶಿಕ್ಷಕ ಅಶೋಕ್ ಕೊಳಂಗಾಯ, ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಹಾಗೂ ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ನೃತ್ಯ ವೈಭವ, ಕರ್ನಾಟಕ ಶಾಸ್ತ್ರೀ ಸಂಗೀತ ನಡೆಯಿತು.

- ದುಗ್ಗಳ ಸದಾನಂದ