ಸೋಮವಾರಪೇಟೆ, ಜ. 30: ದೇಶದ ಎಲ್ಲಾ ನಾಗರಿಕರು ಪ್ರಚಲಿತ ವಿದ್ಯಮಾನಗಳಿಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ಹೇಳಿದರು. ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಬಾರ್ಡ್ ಹಾಗೂ ಕೊಡಗು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ‘ಸಾಲ ಮತ್ತು ಆರ್ಥಿಕ ಅಭಿವೃದ್ಧಿ’ ಹಾಗೂ ‘ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ’ ಮತ್ತು ‘ಮೊಬೈಲ್ ಬ್ಯಾಂಕಿಂಗ್’ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 15 ವರ್ಷಗಳ ಹಿಂದೆ ಕಂಪ್ಯೂಟರ್ ಹಾಗೂ ಮೊಬೈಲ್ ಬಳಸಲು ಜನ ಸಾಮಾನ್ಯರು ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆಯಲ್ಲೂ ಅತ್ಯಗತ್ಯವಾದ ವಸ್ತುವಾಗಿದೆ. ಅದೇ ರೀತಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ಗಳು, ಸ್ವೈಪಿಂಗ್ ಯಂತ್ರ ಹಾಗೂ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯೂ ಕೂಡ ಜನ ಸಾಮಾನ್ಯರಿಗೆ ಸುಲಭವಾಗಲಿದೆ ಎಂದರು.
ನಬಾರ್ಡ್ ನೋಡಲ್ ಅಧಿಕಾರಿ ತುಂಗರಾಜ್ ಮಾತನಾಡಿ, ಆಧುನಿಕ ಯುಗದಲ್ಲಿ ಉನ್ನತ ತಂತ್ರಜ್ಞಾನಗಳನ್ನು ಪ್ರತಿಯೊಬ್ಬರು ಬಳಸಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಆದರೆ ಹಂತ ಹಂತವಾಗಿ ಹೊಸತನಕ್ಕೆ ಹೊಂದಿಕೊಳ್ಳಬೇಕು ಎಂದು ಹೇಳಿದರು.
ನಬಾರ್ಡ್ನ ಸಂಪನ್ಮೂಲ ವ್ಯಕ್ತಿ ರಶೀತಾ ಮುತ್ತಣ್ಣ ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಹಾಗೂ ಮೊಬೈಲ್ ಬ್ಯಾಂಕಿಂಗ್ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಐಗೂರು ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಬೋಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಚಂದ್ರಶೇಖರ್, ಐಗೂರು ಬ್ಯಾಂಕಿನ ನಿರ್ದೇಶಕರು ಗಳು ಉಪಸ್ಥಿತರಿದ್ದರು. ಸ್ವಸಹಾಯ ಗುಂಪಿನ ಸದಸ್ಯರುಗಳಾದ ಮುತ್ತಕ್ಕ ಹಾಗು ಸುಜಾತ ಪ್ರಾರ್ಥಿಸಿದರೆ ಬ್ಯಾಂಕ್ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎ.ಎ.ಡಿಕ್ಕಿರಾಜ್ ನಿರೂಪಿಸಿದರು.