ಮಡಿಕೇರಿ, ಅ. 14: ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಕಂಡು ಬರುತ್ತಿದ್ದು, ಆದಿವಾಸಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲೆಯ ಬುಡಕಟ್ಟು ಕೃಷಿಕರ ಸಂಘದಿಂದ ಇಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಜೆ.ಪಿ. ರಾಜು ಹಾಗೂ ಇತರ ಪದಾಧಿಕಾರಿಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲಾಯಿತು. ಅರಣ್ಯ ಹಕ್ಕು ಮಸೂದೆಯ ಸೌಲಭ್ಯ ಸೇರಿದಂತೆ ಯಾವದೇ ನ್ಯಾಯಯುತ ಹಕ್ಕುಗಳು ಜಿಲ್ಲೆಯ ಆದಿವಾಸಿಗಳಿಗೆ ತಲುಪುತ್ತಿಲ್ಲ ಈ ಬಗ್ಗೆ ಈ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬರಲಾಗಿದ್ದರೂ ಫಲಿತಾಂಶ ಶೂನ್ಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದ್ದಾರೆ.

ಅರಣ್ಯ ಹಕ್ಕು ಮಸೂದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನ್ಯಾಯಾಲಯದ ನಿರ್ದೇಶನವಿದ್ದರೂ ಇದು ಜಾರಿಯಾಗುತ್ತಿಲ್ಲ. ಇದರೊಂದಿಗೆ ಆದಿವಾಸಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಇನ್ನಿತರ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಎಲ್ಲಾ ರಂಗದಲ್ಲಿ ಆದಿವಾಸಿಗಳು ಸೌಲಭ್ಯ ವಂಚಿತರಾಗಿದ್ದಾರೆ ಎಂದು ಪ್ರಮುಖರು ಮನವಿಯಲ್ಲಿ ಆಕ್ಷೇಪಿಸಿದ್ದಾರೆ. ನಗರದ ಐಟಿಡಿಪಿ ಕಚೇರಿಯಿಂದ ತಮಟೆ ವಾದ್ಯದ ಸಹಿತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ. ರಾಜು, ತಾಲೂಕು ಅಧ್ಯಕ್ಷರುಗಳಾದ ಮಡಿಕೇರಿಯ ಕುಡಿಯರ ಮುತ್ತಪ್ಪ, ವೀರಾಜಪೇಟೆಯ ಜೆ.ಕೆ. ರಾಮು, ಸೋಮವಾರಪೇಟೆಯ ಆರ್.ಕೆ. ಚಂದ್ರು, ಕಾರ್ಯದರ್ಶಿ ಪಿ.ಎಸ್. ಮುತ್ತ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.