ಚೆಟ್ಟಳ್ಳಿ, ಜು. 9: ಮೂಲತಃ ಕೊಡಗಿನವರಾದ ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿ ಸುತ್ತಿದ್ದ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಚೆಟ್ಟಳ್ಳಿಯ ಬಿಜೆಪಿ, ಜನಪರ ಹೋರಾಟ ಸಮಿತಿ ಹಾಗೂ ಹಿಂದೂ ಪರ ಸಂಘಟನೆಗಳಿಂದ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ಸಂಜೆ ಚೆಟ್ಟಳ್ಳಿ ಪಟ್ಟಣ ದಲ್ಲಿ ಪ್ರಕರಣಕ್ಕೆ ಕಾರಣರಾದರೆನ್ನಲಾದ ಸಚಿವ ಕೆ.ಜೆ.ಜಾರ್ಜ್ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ತೆರಳಿ ಪಟ್ಟಣದಲ್ಲಿ ಮಾನವ ಸರಪಣಿಯನ್ನು ರಚಿಸಿ ಪ್ರತಿಭಟಿಸಿದರು.
ಬಿಜೆಪಿ ಯುವ ಮುಖಂಡ ಕಂಠಿ ಕಾರ್ಯಪ್ಪ ಮಾತನಾಡಿ, ರಾಜ್ಯ ಸರಕಾರದ ದುರಾಡಳಿತದಿಂದ ಮೂರು ಅಧಿಕಾರಿಗಳನ್ನು ಕಳೆದುಕೊಳ್ಳು ವಂತಾಗಿದೆ. ಮುಂದೆ ನಾವೆಲ್ಲ ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೊಳ್ಳಬೇಕಿದೆ ಎಂದರು.
ಸಹಕಾರ ಸಂಘದ ಉಪಾಧ್ಯಕ್ಷ ತಿಮ್ಮಪ್ಪಯ್ಯ ಮಾತನಾಡಿ, ದಕ್ಷ ಅಧಿಕಾರಿಗಳನ್ನು ಮಟ್ಟ ಹಾಕುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡಬೇಕಿದೆ ಎಂದರು.
ತಾಲೂಕು ಪಂಚಾಯಿತಿಯ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಸರಕಾರದ ಮೂರು ವರ್ಷದ ಸಾಧನೆಯೇ ಮೂರು ದಕ್ಷ ಆಧಿಕಾರಿಗಳ ಕಳದುಕೊಂಡಿದ್ದಾಗಿದೆ.
ಘಟನೆಗೆ ಕಾರಣರಾದವರನ್ನು ಬಂಧಿಸುವವರೆಗೆ ಹೋರಾಟ ಹಮ್ಮಿಕೊಳ್ಳಲಾಗುವದು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಜಾರ್ಜ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.