ಕುಶಾಲನಗರ, ಜ. 4: ಕುಶಾಲನಗರದ ಶ್ರೀ ವಿವೇಕಾನಂದ ಎಜುಕೇಶನ್ ಟ್ರಸ್ಟ್ನ ಆಡಳಿತಾಧಿ ಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಎಂ. ನಾಗೇಶ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ತಿಳಿಸಿದರು.ಸ್ಥಳೀಯ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದಲ್ಲಿ ಟ್ರಸ್ಟ್ ಅಧೀನದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ಮಹಾತ್ಮಗಾಂಧಿ ಪದವಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಈ ಎರಡೂ ಸಂಸ್ಥೆಗಳ ಪರಿಣಾಮಕಾರಿ ಆಡಳಿತಾತ್ಮಕ ದೃಷ್ಟಿಯಿಂದ 8 ಮಂದಿ ಸದಸ್ಯರನ್ನೊಳಗೊಂಡ ನೂತನ ಸಲಹಾ ಸಮಿತಿಯೊಂದನ್ನು ರಚಿಸ ಲಾಗಿದೆ. ಈ ಸಲಹಾ ಸಮಿತಿಯ ನಿರ್ದೇಶನದಂತೆ ಶನಿವಾರಸಂತೆಯ ನಿವೃತ್ತ ಪ್ರಾಂಶುಪಾಲ ಎಂ. ನಾಗೇಶ್ ಅವರನ್ನು ಎರಡೂ ಕಾಲೇಜುಗಳ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ನೂತನ ಆಡಳಿತಾಧಿಕಾರಿ ಎಂ. ನಾಗೇಶ್ ಮಾತನಾಡಿ, ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ಚಿಂತನೆ ಹರಿಸಲಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನಕ್ಕೆ ಸಹಕಾರಿಯಾದ ಅಗತ್ಯ ಮಾರ್ಗದರ್ಶನ ಒದಗಿಸ ಲಾಗುವದು. ಆ ಮೂಲಕ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುವದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟ್ರಸ್ಟಿ ಕೆ.ಎನ್. ನಂಜಪ್ಪ, ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ. ರವೀಂದ್ರ ಬಾಬು, ಮಹಾತ್ಮಗಾಂಧಿ ಪದವಿ ಕಾಲೇಜು ಪ್ರಾಂಶುಪಾಲ ಟಿ.ವಿ. ಪಂಡರಿನಾಥ್ ನಾಯ್ಡು ಇದ್ದರು.