ಸೋಮವಾರಪೇಟೆ, ಜು. 13: ಕಳೆದ ಜೂನ್ 27 ರಂದು ಸಮೀಪದ ಕುಸುಬೂರು ಗ್ರಾಮದಲ್ಲಿ ನಡೆದ ಆಟೋ ಮತ್ತು ವ್ಯಾನ್ ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇಂದಿಗೂ ಚಿಕಿತ್ಸೆಯಲ್ಲಿರುವ ವಿದ್ಯಾರ್ಥಿಗೆ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಸಂಗ್ರಹಿಸಲಾದ ರೂ. 10 ಸಾವಿರ ಹಣವನ್ನು ಇಲ್ಲಿನ ಪೊಲೀಸ್ ಠಾಣಾಧಿಕಾರಿ ಎಂ. ಮಹೇಶ್ ಮೂಲಕ ಬಾಲಕನ ಪೋಷಕರಿಗೆ ವಿತರಿಸಲಾಯಿತು.

ಜೂನ್ 27 ರಂದು ಬೆಳಗ್ಗೆ ಬಜೆಗುಂಡಿ ಗ್ರಾಮದಿಂದ ಬೇಳೂರು ಸರ್ಕಾರಿ ಶಾಲೆಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಕುಸುಬೂರು ಗ್ರಾಮದ ಬಳಿ ವ್ಯಾನ್ ಡಿಕ್ಕಿಪಡಿಸಿತ್ತು. ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಶರತ್‍ನನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಸಾಗಿಸಲಾಗಿತ್ತು.

ಗಂಭೀರ ಗಾಯಗೊಂಡ ಶರತ್ ಇಂದಿಗೂ ಚಿಕಿತ್ಸೆಯಲ್ಲಿದ್ದು, ತಲೆ ಹಾಗೂ ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಈತನ ಪೋಷಕರು ಕೂಲಿ ಕಾರ್ಮಿಕರಾಗಿರುವ ಹಿನ್ನೆಲೆ ಚಿಕಿತ್ಸೆಗೆ ಹಣಕಾಸಿನ ಕೊರತೆ ಎದುರಾಗಿತ್ತು. ಇದನ್ನು ಮನಗಂಡ ನಗರದ ಆಟೋ ಚಾಲಕರು ಮತ್ತು ಮಾಲೀಕರು, ಬಜೆಗುಂಡಿ ಗ್ರಾಮದ ಆಟೋ ಚಾಲಕರು ರೂ. 10 ಸಾವಿರ ಸಂಗ್ರಹಿಸಿ, ಈ ಹಣವನ್ನು ವಿದ್ಯಾರ್ಥಿಯ ತಾಯಿ ಮಂಜುಳಾ ಅವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಯ ಚಿಕಿತ್ಸೆಗೆ ಸಹಾಯ ಹಸ್ತ ನೀಡುವವರು ಮೊ:7349265062 ಸಂಖ್ಯೆಯನ್ನು ಸಂಪರ್ಕಿಸಬಹುದು.

ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗಂಗಾಧರ್, ಪದಾಧಿಕಾರಿಗಳಾದ ಲೋಕೇಶ್, ರಾಜೇಶ್, ಯೋಗೇಶ್, ಆನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.