ಕೂಡಿಗೆ/ಕುಶಾಲನಗರ, ಆ. 15: ಆಟೋದಲ್ಲಿ ಬಾಡಿಗೆಗೆ ತೆರಳಿ ಹಿಂತಿರುಗಿ ಬರುತ್ತಿದ್ದ ಆಟೋ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಗುಡ್ಡೆಹೊಸೂರಿನ ಬಳಿ ನಡೆದಿದೆ. ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದ ಚಂದಪ್ಪ ಅವರ ಪುತ್ರ ಆಟೋ ಚಾಲಕ ಪ್ರವೀಣ್ ಪೂಜಾರಿ (38) ಎಂಬವರೆ ಕೊಲೆಯಾದ ವ್ಯಕ್ತಿ. ಘಟನೆಯ ಹಿನ್ನೆಲೆ: ಭಾನುವಾರ ರಾತ್ರಿ ಕುಶಾಲನಗರದಲ್ಲಿ ನಡೆದ ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಕುಶಾಲನಗರ ದಿಂದ ಪ್ರವೀಣ್‍ಪೂಜಾರಿ ತನ್ನ ಸ್ವಂತ ಆಟೋ (ಕೆಎ12ಎ-2455) ದಲ್ಲಿ ಸಿದ್ದಾಪುರ ರಸ್ತೆಯ ಈಡನ್‍ಗಾರ್ಡನ್ ಸಮೀಪದವರೆಗೆ ಬಾಡಿಗೆಗೆ ತೆರಳಿ ರಾತ್ರಿ ಸುಮಾರು 11.30ರ ವೇಳೆಗೆ ಹಿಂತಿರುಗಿ ಬರುತ್ತಿದ್ದ ಸಂದರ್ಭ ಗುಡ್ಡೆಹೊಸೂರಿನ ಮೊದಲನೇ ತಿರುವಿನಲ್ಲಿ ಪ್ರವೀಣ್‍ಪೂಜಾರಿಯ ಕುತ್ತಿಗೆಯ ಎರಡು ಭಾಗಗಳಿಗೆ, ಹೊಟ್ಟೆಗೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ.

ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಶವವನ್ನು ಕುಶಾಲನಗರ ಶವಾಗಾರಕ್ಕೆ ತಂದಿರಿಸಲಾಗಿತ್ತು. ಘಟನೆ ಹಿನ್ನೆಲೆ ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಮುಂಜಾಗ್ರತಾ ಕ್ರಮವಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸೆಕ್ಷನ್ 144 ಅನ್ನು ಜಾರಿಗೊಳಿಸಿದರು.

ಪ್ರತಿಭಟನೆ: ಸಮಯ 9 ಗಂಟೆ ಆಗುತ್ತಿದ್ದಂತೆಯೇ ಕುಶಾಲನಗರದ ಆಟೋ ಚಾಲಕರ ಸಂಘ ಹಾಗೂ ಕುಶಾಲನಗರ ಹೋಬಳಿ ವ್ಯಾಪ್ತಿಯ ನೂರಾರು ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರು, ಹಿಂದೂಪರ ಸಂಘಟನೆಗಳ ಕಾರ್ಯ ಕರ್ತರು ಶವಾಗಾರದ ಎದುರು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಬಿಡದೇ ಹತ್ಯೆಗೈದ ಆರೋಪಿ ಗಳನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ

(ಮೊದಲ ಪುಟದಿಂದ) ಜಿಲ್ಲಾ ಪೊಲೀಸ್ ಆಡಳಿತ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನೆರೆ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿ ನಗರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಯಿತು.

ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿ ವೈದ್ಯಾಧಿಕಾರಿಯನ್ನು ಕರೆತಂದಾಗ ಆಟೋ ಚಾಲಕರು ಶವ ಪರೀಕ್ಷೆಗೆ ಅವಕಾಶ ನೀಡದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರು ಆಗಮಿಸಬೇಕೆಂದು ಪಟ್ಟು ಹಿಡಿದರು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿಯವರು ಸ್ಥಳಕ್ಕಾಗಮಿಸಿದರು. ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಮೃತ ಕುಟುಂಬಕ್ಕೆ ಪರಿಹಾರ ನೀಡುವ ವ್ಯವಸ್ಥೆ ಹಾಗೂ ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸಲು ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರು 24 ಗಂಟೆಯ ಒಳಗೆ ಕೊಲೆಗೈದಿರುವ ಆರೋಪಿಗಳನ್ನು ಕಂಡುಹಿಡಿದು ಬಂಧಿಸುವ ಹಾಗೂ ಹತ್ಯೆಯಾದ ಆಟೋ ಚಾಲಕನ ಮನೆಗೆ ನಾಳೆ ತೆರಳಿ ಪರಿಹಾರ ನೀಡುವದಾಗಿ ಭರವಸೆ ನೀಡಿರುವದಾಗಿ ತಿಳಿಸಿದರು. ಭರವಸೆ ಈಡೇರದಿದ್ದಲ್ಲಿ ಹೋರಾಟಕ್ಕೆ ತಾನು ಕೂಡ ಬೆಂಬಲ ಸೂಚಿಸುವದಾಗಿ ಹೇಳುವದರ ಮೂಲಕ ಆಟೋ ಚಾಲಕರನ್ನು ಪ್ರತಿಭಟನೆಯನ್ನು ಕೈಬಿಡುವಂತೆ ಶವವನ್ನು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಕೋರಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸುದ್ದಿಗಾರ ರೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯ ವತಿಯಿಂದ ಆರೋಪಿ ಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ತಂಡವನ್ನು ರಚಿಸಲಾಗಿದೆ ಎಂದರು.

ಈ ಸಂದರ್ಭ ಕುಶಾಲನಗರಾ ದ್ಯಂತ ವಿವಿಧ ಸರ್ಕಲ್ ಹಾಗೂ ಗುಡ್ಡೆಹೊಸೂರು ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪೊಲೀಸ್ ಬಂದೋಬಸ್ತ್‍ಗಾಗಿ ಐಜಿ ಬಿ.ಕೆ.ಸಿಂಗ್, ಹಾಸನ ಎಸ್‍ಪಿ ಶೋಭಾರಾಣಿ, ಚಾಮರಾಜನಗರ ಎಸ್ ಪಿ ಮುತ್ತುರಾಜ್, 24 ಉನ್ನತಮಟ್ಟದ ಅಧಿಕಾರಿಗಳು ಸೇರಿದಂತೆ 10 ಮೀಸಲು ಪೊಲೀಸ್ ಪಡೆ ಸೇರಿದಂತೆ 1200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್‍ಗಾಗಿ ನೇಮಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ಪ್ರತಿಭಟನೆ ನಡೆಯಿತು. ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಪ್ರತಿಭನಾಕಾರರು ಒತ್ತಾಯಿಸಿದರು.

ಅಧಿಕಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿವೈಎಸ್‍ಪಿ ಕುಮಾರ್ ಸಮ್ಮುಖದಲ್ಲಿ ಮೃತ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ತೆರಳಿದ ನಂತರ ಮೃತರ ಮನೆಯವರು ಹಾಗೂ ಆಟೋ ಚಾಲಕರು ಶವ ಮರಣೋತ್ತರ ಪರೀಕ್ಷೆಯ ಬಳಿಕ ಶವ ಸಂಸ್ಕಾರಕ್ಕೆ ತೆರಳಲು ಸಿದ್ಧತೆ ನಡೆಸಿದರು. ಈ ಸಂದರ್ಭ ಹಿಂದೂ ಸಂಘಟನೆಗಳ ಪ್ರಮುಖರಾದ ಮಂಜುನಾಥ್, ವಿಜಯಕುಮಾರ್, ಜಿ.ಎಲ್. ನಾಗರಾಜ್, ಲಕ್ಷ್ಮಿನಾರಾಯಣ, ಬಿ.ಟಿ. ಭಾರತೀಶ್, ಭಜರಂಗದಳ ಸಂಚಾಲಕ ಅಜಿತ್‍ಕುಮಾರ್, ಸಹಸಂಚಾಲಕ ಚೇತನ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಮಾಜಿ ಸದಸ್ಯ ಭಾರತೀಶ್ ಪರಿಷತ್ತಿನ ಪ್ರಮುಖರುಗಳಾದ ರಮೇಶ್, ಬಾಬಣ್ಣ, ವಿಶ್ವನಾಥ್ ಸೇರಿದಂತೆ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕಾಗಮಿಸುವಂತೆ ಪಟ್ಟುಹಿಡಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೊಂದಿಗೆ ಒಂದು ಗಂಟೆಗಳ ಕಾಲ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಸಂಜೆ ವೇಳೆಗೆ ಅತ್ತೂರಿಗೆ ಪ್ರವೀಣ್ ಪೂಜಾರಿ ಶವವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು. ತಾ. 17ರವರೆಗೆ ಕುಶಾಲನಗರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಂಜನ್ ಪ್ರತಿಕ್ರಿಯೆ

ಅಮೇರಿಕಾ ಪ್ರವಾಸದಲ್ಲಿರುವ ಶಾಸಕ ಅಪ್ಪಚ್ಚುರಂಜನ್ ‘ಶಕ್ತಿ’ಯೊಂದಿಗೆ ಮಾತನಾಡಿ, ಪ್ರವೀಣ್ ಪೂಜಾರಿ ಹತ್ಯೆ ಸಂಬಂಧ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿರುವದಾಗಿ ತಿಳಿಸಿದರಲ್ಲದೆ, ಪ್ರಕರಣವನ್ನು ಖಂಡಿಸುವದಾಗಿ ಹೇಳಿದರು. ಸ್ಥಳಕ್ಕೆ ಭೇಟಿ ನೀಡಿದ್ದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಉಸ್ತುವಾರಿ ಸಚಿವರ ಬಳಿ ಒತ್ತಾಯಿಸಿರುವದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಇತರರಿದ್ದರು.

ಆಟೋ ಚಾಲಕರಿಗೆ ಭದ್ರತೆಯಿಲ್ಲ

ಆಟೋ ಚಾಲಕರು ಯಾವದೇ ರೀತಿಯ ಭದ್ರತೆಯಿಲ್ಲದೆ ರಕ್ಷಣೆಯ ಕೊರತೆಯಿದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ನಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಜಿಲ್ಲಾ ಆಟೋ ಚಾಲಕರ ಜಿಲ್ಲಾಧಿಕಾರಿಗೆ ಮನವಿ ಸಲಿದರು.

-ವರದಿ: ಕೆ.ಕೆ. ನಾಗರಾಜ ಶೆಟ್ಟಿ