ಕುಶಾಲನಗರ, ನ. 25: ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿದ್ದ ಹೊಸಪಟ್ಟಣ ಕಾಫಿ ಬೆಳೆಗಾರ ಶಿವಕುಮಾರ್ ಮನೆ ದರೋಡೆ ಪ್ರಕರಣ ಸಂಬಂಧ ಕೊಡಗು ಜಿಲ್ಲಾ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಂತರ್‍ಜಿಲ್ಲಾ ಡಕಾಯಿತರಾದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಲಾರಿ ಚಾಲಕ ಅಬ್ದುಲ್ ರೆಹಮಾನ್ (24), ಮಂಗಳೂರು ಉಲ್ಲಾಳ ಬಳಿಯ

ಗುಜರಿ ವ್ಯಾಪಾರಿ ಮಹಮ್ಮದ್ ಹನೀಫ್ (28), ಉಲ್ಲಾಳದ ತೊಕ್ಕೊಟ್ಟು ಬಳಿಯ ಮೀನು ವ್ಯಾಪಾರಿ ಮಹಮ್ಮದ್ ಫಯಾಜ್ (28) ಮತ್ತು ಹಂಪನಕಟ್ಟೆ ಸಮೀಪದ ಟೈಲರ್ ಕೆಲಸಗಾರ ಜಾಫರ್ ಸಾದಿಕ್ (25) ಎಂಬವರುಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 23 ರಂದು ಆರೋಪಿಗಳು ಇನ್ನೂ 5 ಮಂದಿ ಸೇರಿದಂತೆ ಒಟ್ಟು 9 ಮಂದಿ ಮಂಗಳೂರಿನಿಂದ ಮಡಿಕೇರಿಗೆ ಬಂದು ಮಡಿಕೇರಿಯ ಆಟೋ ಚಾಲಕ ಕೃಷ್ಣ ಎಂಬಾತನೊಂದಿಗೆ ಸೇರಿ ಸಂಚು ರೂಪಿಸಿ ಈ ಕೃತ್ಯ ಎಸಗಿರುವದಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಮಡಿಕೇರಿಯಿಂದ ಕುಶಾಲನಗರ ಕಡೆಗೆ ಇನ್ನೋವ ಕಾರೊಂದರಲ್ಲಿ ಬಂದು ಕಾರಿನ ನಂಬರ್ ಪ್ಲೇಟ್ ಬದಲಿಸಿಕೊಂಡು ಹೊಸಪಟ್ಟಣದ ಶಿವಕುಮಾರ್ ಮನೆಯ ದರೋಡೆ ಮಾಡಿರುವದಾಗಿ ಅವರು ತಿಳಿಸಿದ್ದಾರೆ. 24 ರಂದು ಬೆಳಗ್ಗೆ 5 ಗಂಟೆಗೆ ಪೂರ್ವ ನಿಯೋಜಿತ ಸಿದ್ದತೆಯೊಂದಿಗೆ ಆರೋಪಿಗಳು ಮಂಕಿ ಕ್ಯಾಪ್ ಧರಿಸಿ ಹೊಂಚು ನಡೆಸಿ ಶಿವಕುಮಾರ್ ಮತ್ತು ವಿಶ್ವನಾಥ್ ಮೇಲೆ ಲಾಂಗ್ ತೋರಿಸಿ, ಮನೆಗೆ ಬೀಗ ಜಡಿದು ಹಿಂಬದಿ ಬಾಗಿಲಿನಿಂದ ನುಗ್ಗಿ ಹಲ್ಲೆ ನಡೆಸಿ ನಂತರ ದರೋಡೆ ಮಾಡಿರುವದಾಗಿ ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭ ಮನೆಗೆ ಬಂದ ಶಿವಕುಮಾರ್ ಸ್ನೇಹಿತ ಈಶ್ವರ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಗಳು ಮನೆಯ ಲಾಕರ್ ಮತ್ತು ಇನ್ನಿತರ ಕಪಾಟುಗಳನ್ನು ತಡಕಾಡಿ ಮನೆಯಲ್ಲಿದ್ದ 40 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ, ಬೆಳ್ಳಿ, ಚಿನ್ನದ ನಾಣ್ಯಗಳನ್ನು ಚೀಲಕ್ಕೆ ತುಂಬಿ ಶಿವಕುಮಾರ್‍ಗೆ ಸೇರಿದ ರಿವಾಲ್ವರ್‍ನೊಂದಿಗೆ ಪರಾರಿಯಾಗಿರುವದಾಗಿ ವಿಚಾರಣೆ ಸಂದರ್ಭ ಮಾಹಿತಿ ದೊರೆತಿದೆ ಎಂದು ತಿಳಿಸಿದ್ದಾರೆ.

ಘಟನೆ ಸಂದರ್ಭ ಆರೋಪಿಗಳಾದ ಕೃಷ್ಣ, ನಿಜಾಮ್, ಮಜೀದ್, ಸಲಿಯಾತ್, ಜಲಾಲ್ ಎಂಬವರುಗಳು ಆಭರಣಗಳಿದ್ದ ಬ್ಯಾಗ್‍ನೊಂದಿಗೆ ಪರಾರಿಯಾಗಿರುವದಾಗಿ ತಿಳಿಸಿದ್ದಾರೆ. ಈ ಸಂದರ್ಭ ಕಾರು ಚಾಲಕ ಕೂಡ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಉಳಿದ 4 ಆರೋಪಿಗಳು ದಾರಿ ತಪ್ಪಿ ನೆರೆಯ ಕಾಫಿ ತೋಟಗಳಲ್ಲಿ ಪತ್ತೆಯಾಗಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ 42,700 ರೂ ನಗದು, 4 ಚಿನ್ನದ ಉಂಗುರ, 2 ಚಿನ್ನದ ಚೈನ್ ಸೇರಿದಂತೆ ಚಿನ್ನಾಭರಣ, 1 ರಿವಾಲ್ವರ್, 2 ಲಾಂಗ್ ವಶಪಡಿಸಿಕೊಳ್ಳಲಾಗಿದ್ದು ಉಳಿದ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಮಂಗಳೂರಿನಿಂದ ಆರೋಪಿಗಳು ಬಾಡಿಗೆ ಕಾರೊಂದರಲ್ಲಿ ಮಡಿಕೇರಿ ಕಡೆಗೆ ಬಂದಿದ್ದು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವದಾಗಿ ಕಾರಿನ ಚಾಲಕನಿಗೆ ಸುಳ್ಳು ಮಾಹಿತಿ ನೀಡಿರುವದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್‍ಪಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂಪತ್‍ಕುಮಾರ್ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿಗಳಾದ ಜೆ.ಇ.ಮಹೇಶ್, ಅನೂಪ್ ಮಾದಪ್ಪ, ಮಹೇಶ್ ಮತ್ತು ಮಡಿಕೇರಿ ಅಪರಾಧ ಪತ್ತೆದಳ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಘಟನೆ ನಡೆದ ರಾತ್ರಿಯೇ ಪತ್ತೆಹಚ್ಚಿ ಬಂದಿಸಿದ್ದಾರೆ.