ಮಡಿಕೇರಿ, ಸೆ. 25: ಹಿಂದೂ ಮಲೆಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ ದಲ್ಲಿ ಹಲವು ವಿಶೇಷ ಕಾರ್ಯಕ್ರಮ ಗಳೊಂದಿಗೆ ಸಾಂಪ್ರದಾಯಿಕವಾಗಿ ಆಚರಿಸ ಲಾಯಿತು.ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕಳಸ ಹೊತ್ತ ನೂರಾರು ಮಹಿಳೆಯರು ಚಂಡೆ ವಾದ್ಯ, ಮಾವೇಲಿ ವೇಷಧಾರಿಗಳು, ಬಲಿಚಕ್ರವರ್ತಿ ವೇಷಧಾರಿ ಹಾಗೂ ಸಮಾಜ ಬಾಂಧವರು ಮೆರವಣಿಗೆಗೆ ಮೆರುಗು ನೀಡಿದರು.
ಮೆರವಣಿಗೆ ಚೌಡೇಶ್ವರಿ ದೇವಾಲಯದಿಂದ ಪ್ರಾರಂಭವಾಗಿ ರಾಜಬೀದಿಗಾಗಿ ಚೌಕಿ, ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತದ ಮುಖಾಂತರ ಸಾಗಿ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಕೊನೆಗೊಂಡಿತು.
ದುರಾಭಿಮಾನ ಸಲ್ಲದು - ಕೆಜಿಬಿ
ಪ್ರತಿಯೊಬ್ಬರಿಗೂ ತಮ್ಮ ಜನಾಂಗದ ಬಗ್ಗೆ ಅಭಿಮಾನವಿರಬೇಕೆ ಹೊರತು ದುರಭಿಮಾನವಿರಬಾರದು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.
ಹಿಂದೂ ಮಲೆಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭೂಮಿಯಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಜಾತಿಯಲ್ಲಿ ಹುಟ್ಟಲೇ ಬೇಕು. ಅದು ಪ್ರಕೃತಿ ನಿಯಮ. ತಾವು ಹುಟ್ಟಿದ ಜಾತಿ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ವಿರಬೇಕು ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು. ಕೊಡಗು ಹಾಗೂ ಕೇರಳದ ಸಂಬಂಧ ತಲತಲಾಂತರಗಳಿಂದ ಉತ್ತಮವಾಗಿ ನಡೆದುಕೊಂಡು ಬಂದಿದೆ. ಇಲ್ಲಿನ ಎಲ್ಲಾ ದೇವಸ್ಥಾನಗಳಿಗೆ ಕೇರಳವೇ ಮೂಲಸ್ಥಾನ ಎಂದು ನುಡಿದರು. ಪ್ರತಿಯೊಬ್ಬ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಮಲಯಾಳಿ ಸಂಘದ ಈ ಕಾರ್ಯಕ್ರಮ ಬೇರೆ ಸಮಾಜ, ಸಂಘ - ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಮಾತನಾಡಿ, ಸಂಘ ಮಕ್ಕಳ ಉನ್ನತ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಸಲಹೆ ನೀಡಿದರು.ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್ ರಮೇಶ್ ಮಾತನಾಡಿ, ಮಲಯಾಳಿ ಸಮಾಜ ಬಾಂಧವರನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಹಾಗೂ ನಮ್ಮ ಆಚಾರ - ವಿಚಾರ ನಶಿಸಿ ಹೋಗದಂತೆ ಮುಂದಿನ ಪೀಳಿಗೆಗೆ ತಿಳಿ ಹೇಳುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.
ಜನಾಂಗ ಬಾಂಧವರಿಗಾಗಿ ಸಂಘ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಭರವಸೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಮಲಯಾಳಿ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಚೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಎಸ್. ಸುರೇಶ್, ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಇದ್ದರು. 2015-16 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರಿಯ ಟಿ.ಕೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮದನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಓಣಂ ಆಚರಣೆಯ ಪ್ರಯುಕ್ತ ಪೂಕಳಂ ಸ್ಪರ್ಧೆ ನಡೆಯಿತು.