ಕುಶಾಲನಗರ, ಜ. 8: ಕುಶಾಲನಗರ ಸುತ್ತಮುತ್ತ ಪಟ್ಟಣದ ವಿವಿಧೆಡೆ ಮಳಿಗೆಗಳು ಹಾಗೂ ಜಾಹೀರಾತು ಫಲಕಗಳಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಒತ್ತು ಕೊಟ್ಟಿರುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದ್ದು, ಇಂತಹ ಫಲಕಗಳನ್ನು ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕುಶಾಲನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಸಮ್ಮೇಳನ ನಡೆಯುವ ಸಂದರ್ಭ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಬಗ್ಗೆ ಪರಿಶೀಲನೆಯಾಗಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮಾಹಿತಿ ನೀಡಿದ್ದಾರೆ.

ಸರಕಾರದ ನಿಯಮದ ಪ್ರಕಾರ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವ ಮೂಲಕ ಕನ್ನಡದ ಬಗ್ಗೆ ಸಮ್ಮೇಳನದ ಉದ್ಧೇಶ ಸಫಲಗೊಳಿಸುವಲ್ಲಿ ಪಂಚಾಯಿತಿ ಕಾರ್ಯೋನ್ಮುಖವಾಗಬೇಕಿದೆ ಎಂದಿದ್ದಾರೆ. ತಪ್ಪಿದಲ್ಲಿ ವೇದಿಕೆಯ ವತಿಯಿಂದ ಹೋರಾಟದ ಮೂಲಕ ಫಲಕಗಳಿಗೆ ಮಸಿ ಬಳಿದು ಪಂಚಾಯಿತಿ ವಿರುದ್ಧ ಪ್ರತಿಭಟಿಸ ಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮನವಿ ಸ್ವೀಕರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭ ವೇದಿಕೆಯ ಜಿಲ್ಲಾ ಘಟಕದ ಸಂಚಾಲಕರಾದ ಬಿ.ಎ. ನಾಗೇಗೌಡ, ಖಜಾಂಚಿ ಎ.ಎಸ್. ಹರೀಶ್, ಕಾರ್ಯದರ್ಶಿ ಸತೀಶ್ ಕುಮಾರ್, ಪ್ರಮುಖರಾದ ದಿನೇಶ್ ರೈ, ಮಂಜುನಾಥ್, ಕೆ.ಎಸ್. ನಾಸಿರ್, ಉಮೇಶ್, ಪದ್ಮಪ್ಪ, ತನಿಯಪ್ಪ, ಶರಣ್, ಗಣೇಶ್ ಮತ್ತಿತರರು ಇದ್ದರು.