ಸೋಮವಾರಪೇಟೆ, ನ. 25: ತಾಲೂಕಿನ ಮಾದಾಪುರ ಹೋಬಳಿಯ ಕುಂಬೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗದ ಹಿನ್ನೆಲೆ ಡಿ. 5 ರಂದು ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಮಾದಾಪುರ ಗ್ರಾ.ಪಂ. ಸದಸ್ಯ ಹೆಚ್.ಎಂ. ಸೋಮಪ್ಪ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಪ್ರತಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧೀನದಲ್ಲಿ ಕುಂಬೂರು ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಕಾರ್ಯ ನಿರ್ವಹಿಸುತ್ತಿದ್ದು, ಕೇವಲ ಸೋಮವಾರ ಮಾತ್ರ ತೆರೆದಿರುತ್ತದೆ. ಇದರಿಂದ ಬಡ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಎಲ್ಲರಿಗೂ ಪಡಿತರ ದೊರಕುವದಿಲ್ಲ. ಪ್ರತಿದಿನ ನ್ಯಾಯಬೆಲೆ ಅಂಗಡಿ ತೆರೆಯುವದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರಸ್ವತಿ ಸ್ವಸಹಾಯ ಸಂಘಕ್ಕೆ ನ್ಯಾಯಬೆಲೆ ಅಂಗಡಿಯ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ನ್ಯಾಯಬೆಲೆ ಅಂಗಡಿಯಿಂದ ವಿತರಣೆ ಆಗುತ್ತಿರುವ ಆಹಾರ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಅಕ್ಕಿ, ಉಪ್ಪು, ಮತ್ತಿತರ ವಸ್ತುಗಳು ಬಣ್ಣ ಮಾಸಿದೆ ಎಂದು ಆರೋಪಿಸಿದರಲ್ಲದೆ, ಕಳಪೆ ಗುಣಮಟ್ಟದ ಉಪ್ಪನ್ನು ಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಗಂಡು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ವಿತರಿಸುತ್ತಿಲ್ಲ. ತಾಲೂಕಿನಾದ್ಯಂತ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಖರೀದಿಸಿದ ಸಾಮಗ್ರಿಗಳಿಗೆ ರಶೀದಿ ನೀಡದೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ಎನ್.ಎನ್. ಪ್ರಸನ್ನ ಇದ್ದರು.