ಸೋಮವಾರಪೇಟೆ, ಜೂ.20: ತಾಲೂಕಿನ ಐಗೂರು ಪಂಚಾಯಿತಿ ವ್ಯಾಪ್ತಿಯ ಕಾಜೂರು ರಸ್ತೆಯ ಬಳಿಯಿಂದ 2 ಕಿಲೋಮೀಟರ್ ದೂರದವರೆಗೆ ನಿರ್ಮಾಣ ವಾಗುತ್ತಿರುವ ಆನೆ ಕಂದಕ ನಿರ್ಮಾಣದ ಕಾಮಗಾರಿ ಸಮರ್ಪಕ ವಾಗಿ ನಡೆಯುತ್ತಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಆಕ್ಷೇಪಿಸಿ, ಸಮರ್ಪಕ ಕಾಮಗಾರಿ ನಿರ್ವಹಿಸು ವಂತೆ ತಾಕೀತು ಮಾಡಿದರು.
ಸೋಮವಾರ ಕಾಜೂರು ಅರಣ್ಯ ವ್ಯಾಪ್ತಿಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ಈ ಕಾಮಗಾರಿ 3:3:2ರ ಅನುಪಾತದಲ್ಲಿ ಇರಬೇಕಾಗಿದ್ದು, ಆದರೆ ಸಮರ್ಪಕವಾಗಿ ಕಾಮಗಾರಿ ಆಗುತ್ತಿಲ್ಲ. ಇದರ ಬಗ್ಗೆ ಈಗಾಗಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
ಕಂದಕದಿಂದ ತೆಗೆದ ಮಣ್ಣನ್ನು ಪಕ್ಕದಲ್ಲೇ ಸುರಿಯಲಾಗುತ್ತಿದ್ದು, ಇದರಿಂದ ಆನೆಗಳು ಪುನಃ ಮಣ್ಣನ್ನು ಕಂದಕಕ್ಕೆ ತಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ವೈಜ್ಞಾನಿಕವಾಗಿ ಕಾಮಗಾರಿಯನ್ನು ನಡೆಸಬೇಕೆಂದು ಅವರು ಹೇಳಿದರು.