ಮಡಿಕೇರಿ, ನ. 29: ಅಶ್ವಿನಿ ಆಸ್ಪತ್ರೆ..., ಈ ಹೆಸರು ಕೇಳಿದೊಡನೆ ಕಣ್ಣಿಲ್ಲದೆ ಗಾಢಾಂಧಕಾರದಲ್ಲಿರುವ ವ್ಯಕ್ತಿಯ ಮನದಲ್ಲಿ ಭವಿಷ್ಯದ ಭರವಸೆ ಮೂಡುತ್ತದೆ. ದೃಷ್ಟಿ ಇಲ್ಲದೆ ಕಂಗಾಲಾಗಿರುವವರ ಬದುಕಿನಲ್ಲಿ ಬೆಳಕು ಕಾಣುವ ವಿಶ್ವಾಸ ತನ್ನಿಂತಾನೆ ವ್ಯಕ್ತವಾಗುತ್ತದೆ. ಇದಕ್ಕೆ ಕಾರಣ ಅಶ್ವಿನಿ ಆಸ್ಪತ್ರೆ ಮಾಡುತ್ತಿರುವ ಅಂಧರ ಸೇವೆ...
ಹೌದು 1977ರಲ್ಲಿ ಸ್ಥಾಪನೆ ಗೊಂಡು 1987ನೇ ಇಸವಿಗೆ ದಶಮಾನೋತ್ಸವ ಪೂರೈಸಿದ ಸವಿ ನೆನಪಿಗಾಗಿ ಅಶ್ವಿನಿ ಆಸ್ಪತ್ರೆ ಆರಂಭಿಸಿದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಅದೆಷ್ಟೋ ಮಂದಿಯ ಬದುಕಿನಲ್ಲಿ ಬೆಳಕು ಮೂಡಿಸಿದೆ. ದೃಷ್ಟಿಯಿಲ್ಲದೆ ಕೊರಗುತ್ತಿದ್ದ ಸಾವಿರಾರು ಜೀವಗಳಿಗೆ ದಾರಿ ತೋರಿಸಿರುವ ಅಶ್ವಿನಿ ಆಸ್ಪತ್ರೆ ಅಂಧರ ಪಾಲಿನ ಆಸರೆ ಎನಿಸಿಕೊಂಡಿದೆ.
ಆಸ್ಪತ್ರೆಯ ಸ್ಥಾಪನೆಯಲ್ಲಿ ಪೇಜಾವರ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆಯವರು ವಹಿಸಿದ್ದ ಶ್ರಮ ಸಾರ್ಥಕತೆ ಪಡೆಯುತ್ತಿದೆ. ಆಸ್ಪತ್ರೆಯ ದಶಮಾನೋತ್ಸವ ಸಂದರ್ಭದಲ್ಲಿ ‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ...,’ ಎಂಬ ಪೇಜಾವರ ಶ್ರೀಗಳ ನುಡಿ ಹಾರೈಕೆಯೊಂದಿಗೆ ಆರಂಭವಾದ ನೇತ್ರ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಈ ಬಾರಿ ಮೂವತ್ತನೇ ವರ್ಷಕ್ಕೆ ಕಾಲಿಟ್ಟಿದ್ದು, ಅಶ್ವಿನಿ ಆಸ್ಪತ್ರೆ 40ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಕಳೆದ ಬಾರಿ ಈ ಶಿಬಿರದಲ್ಲಿ 3500 ಮಂದಿಯನ್ನು ತಪಾಸಣೆ ಮಾಡಿ, 465 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈ ಬಾರಿ 55 ಸ್ಥಳಗಳಲ್ಲಿ 4000 ಮಂದಿಗೆ ತಪಾಸಣೆ ಮಾಡಿ, 400ಕ್ಕೂ ಅಧಿಕ ಮಂದಿಗೆ ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದ್ದು, 12 ಮಂದಿ ವೈದ್ಯರ ತಂಡÀ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 85 ಮಂದಿ ಶಸ್ತ್ರ ಚಿಕಿತ್ಸೆಯ ಯಶಸ್ಸಿಗಾಗಿ ಸನ್ನದ್ಧ ರಾಗಿದ್ದಾರೆ.
(ಮೊದಲ ಪುಟದಿಂದ) ಶಿಬಿರಕ್ಕಾಗಿ 14,45,000 ರೂ. ವೆಚ್ಚ ಮಾಡಲಾಗುತ್ತಿದೆ.
ತಾ. 30ರಂದು (ಇಂದು) ಮತ್ತು ಡಿ. 1 ರಂದು ಕೊಡಗು ಜಿಲ್ಲೆಯಾದ್ಯಂತ, ಪಿರಿಯಾಪಟ್ಟಣ ಹಾಗೂ ಕೆ.ಆರ್. ತಾಲೂಕಿನ ಕೆಲವು ಆಯ್ದ ಹಳ್ಳಿಗಳಲ್ಲಿ ನೇತ್ರ ಪರೀಕ್ಷೆ ಮಾಡಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರನ್ನು ಆಸ್ಪತ್ರೆಗೆ ಕರೆತಂದು ಶಸ್ತ್ರ ಚಿಕಿತ್ಸೆ ಬಳಿಕ ಶಿಬಿರಾರ್ಥಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವದು. ಡಿ. 2ರಂದು ಶಿಬಿರ ಉದ್ಘಾಟನೆಗೊಳ್ಳಲಿದೆ. ಶಿಬಿರಾರ್ಥಿಗಳಿಗೆ ಮತ್ತು ಸಹಾಯಕರಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕುಲಕರ್ಣಿ ತಿಳಿಸಿದ್ದಾರೆ.
ಹಲವು ಸಂಘ ಸಂಸ್ಥೆಗಳು, ದಾನಿಗಳ ಸಹಕಾರದಿಂದ ಶಿಬಿರ ನಡೆಯಲಿದ್ದು, ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದಿಂದ 18 ಸಾವಿರ ರೂ., ಬೈಲುಕುಪ್ಪೆಯ ಡ್ರಿಕುಂಗ್ ಚಾರಿಟೇಬಲ್ ಟ್ರಸ್ಟಿನಿಂದ ರೂ. 50000, ಮಡಿಕೇರಿ ಸಂತ ಮೈಕಲರ ಚರ್ಚ್ ಹಾಗೂ ಚಿಕ್ಕಪೇಟೆಯ ಮಸೀದಿಯಿಂದ ರಾಜರಾಜೇಶ್ವರಿ ದೇವಾಲಯದಿಂದ ಊಟಕ್ಕೆ ಅಗತ್ಯವಾದ ಪದಾರ್ಥಗಳು ಶಿಬಿರಕ್ಕೆ ಲಭ್ಯವಾಗುತ್ತಿವೆ. ಜಾತಿ, ಮತದ ಬೇಧವಿಲ್ಲದೆ ಹಲವಾರು ಸಂಘ ಸಂಸ್ಥೆಗಳು, ದೇವಾಲಯಗಳು, ಮಠಾಧಿಪತಿಗಳು, ದಾನಿಗಳು ಈ ಶಿಬಿರಕ್ಕಾಗಿ ನೀಡುತ್ತಿರುವ ತನು, ಮನ, ಧನದ ಸಹಕಾರ ಹಾಗೂ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳ ಶ್ರಮ ಶಿಬಿರದ ಯಶಸ್ಸಿಗೆ ಕಾರಣವಾಗಿದೆ ಎಂದು ಆಸ್ಪತ್ರೆಯ ಟ್ರಸ್ಟಿ ಎಂ.ಸಿ. ಗೋಖಲೆ ಅವರು ಹೇಳಿದ್ದಾರೆ.