ಮಡಿಕೇರಿ, ಆ. 17: ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸದೇ ಇರುವಂತಹ ಅಂಗಡಿಗಳಿಗೆ ಹಣ ಮಂಜೂರು ಮಾಡಲಾಗಿದೆ. ಜೀವಂತವಿಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಕೊಟೇಷನ್ ತೆಗೆದುಕೊಳ್ಳಲಾಗಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಮಿತಿ ಪ್ರಮುಖರಾದ ಪ್ರಸನ್ನಭಟ್ ಹಾಗೂ ಅರುಣ್ ಶೆಟ್ಟಿ ಇವರುಗಳು ಆರೋಪಿಸಿದರು. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಯ ಬಳಿ ಸ್ಪಷ್ಟನೆ ಬಯಸಿದರೂ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಇವರುಗಳು ತಾ. 18ರಂದು (ಇಂದು) ಕೂಡ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ನಡೆಸುವದಾಗಿ ಹೇಳಿದರು.