ಸೋಮವಾರಪೇಟೆ, ಜು. 30: ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸುವ ಮತಗಳಲ್ಲಿ ಶೇ. 80 ರಷ್ಟು ಮತಗಳು ಅಲ್ಪಸಂಖ್ಯಾರದ್ದೇ ಆಗಿದೆ. ಈ ಹಿನ್ನೆಲೆ ಕೊಡಗಿನ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ದಿನೇಶ್ ಗುಂಡೂರಾವ್ ಅವರಿಗೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್ ಸೇರಿದಂತೆ ಪದಾಧಿಕಾರಿಗಳು ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಕೊಡಗಿನ ಅಲ್ಪಸಂಖ್ಯಾತರ ಕೊಡುಗೆ ಸಾಕಷ್ಟಿದೆ. ಎಲ್ಲಾ ಚುನಾವಣೆಗಳಲ್ಲೂ ಇವರು ಕಾಂಗ್ರೆಸ್ ಕೈ ಬಲಪಡಿಸಿದ್ದಾರೆ. ಆದರೆ ಕೊಡಗಿನ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ರಾಜ್ಯಮಟ್ಟದಲ್ಲಿ ಯಾವದೇ ಸ್ಥಾನಮಾನ ನೀಡಿಲ್ಲ. ಈ ಹಿನ್ನೆಲೆ ಮುಂದಿನ ಆಗಸ್ಟ್‍ನಲ್ಲಿ ನಡೆಯಲಿರುವ ನಿಗಮ ಮಂಡಳಿಗಳ ಪುನರ್ ರಚನೆ ಸಂದರ್ಭ ನಿಗಮಗಳ ಅಧ್ಯಕ್ಷ ಸ್ಥಾನ ಮತ್ತು ಕೆಪಿಸಿಸಿಯಲ್ಲಿ ಉತ್ತಮ ಅವಕಾಶಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ. ಹ್ಯಾರೀಸ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಅಬ್ದುಲ್ ರಹಮಾನ್, ಪ್ರಮುಖರಾದ ಸಮದ್, ಸುನಿಲ್, ಕಲೀಂಮುಲ್ಲಾ, ಶಮೀರ್, ಮೊಹಮ್ಮದ್ ಹನೀಫ್, ಕೆ.ಎ. ಹುಸೈನ್, ಕೆ.ಇ. ಲತೀಫ್ ಸೇರಿದಂತೆ ಇತರರು ಭಾಗವಹಿಸಿದ್ದರು.