ಮಡಿಕೇರಿ, ಜೂ. 24: ನಾಪೋಕ್ಲು ಹೋಬಳಿಯ ಕಕ್ಕಬೆ ವಿಭಾಗದ ಗ್ರಾಮ ಲೆಕ್ಕಿಗರೊಬ್ಬರು ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದೆ ವಿನಾಕಾರಣ ವಿಳಂಬ ಧೋರಣೆ ಅನುಸರಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಂಜಿಲ-ಕಕ್ಕಬೆ ಗ್ರಾಮದ ಪ್ರಮುಖರಾದ ಕೆ.ಎಂ. ಹರೀಶ್ ನಂಜಪ್ಪ ಕರ್ತವ್ಯ ಲೋಪ ಎಸಗುತ್ತಿರುವ ಗ್ರಾಮ ಲೆಕ್ಕಿಗರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಕಕ್ಕಬೆ ವಿಭಾಗದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಇವರು ಪಡಿತರ ಚೀಟಿ, ಆದಾಯ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡದೆ ಸತಾಯಿಸುತ್ತಿದ್ದಾರೆ. ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ನೀಡದೆ ಕಿರುಕುಳ ನೀಡುವದಲ್ಲದೆ ದರ್ಪದ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ಗ್ರಾಮ ಸಭೆಗಳಲ್ಲಿ ಗ್ರಾಮ ಲೆಕ್ಕಿಗರ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ.
ಇತ್ತೀಚೆಗೆ ರಾಜ್ಯ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಆಗಮಿಸಿದ ಸಂದರ್ಭ ಈ ಸಿಬ್ಬಂದಿ ವಿರುದ್ಧ ದೂರನ್ನು ನೀಡಲಾಗಿದೆ. ಇವರನ್ನು ಬೇರೆಡೆಗೆ ವರ್ಗಾಯಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದರೂ ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯ ಗ್ರಾಮಸ್ಥರು ನಿತ್ಯ ಸಂಕಷ್ಟವನ್ನು ಎದುರಿಸುವಂತಾಗಿದ್ದು, ತಕ್ಷಣ ಜಿಲ್ಲಾಡಳಿತ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ವರ್ಗಾವಣೆ ಮಾಡಿ ಉತ್ತಮ ವ್ಯಕ್ತಿತ್ವದ ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಬೇಕೆಂದು ಹರೀಶ್ ನಂಜಪ್ಪ ಒತ್ತಾಯಿಸಿದರು. ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ಗ್ರಾಮಸ್ಥರು ತೀರ್ಮಾನಿಸಿರುವದಾಗಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕೆ.ಎ. ಅಶೋಕ್, ಪಿ.ಕೆ. ಮಹಮ್ಮದ್ ಹಾಗೂ ಕೆ.ಎಂ. ಚಂಗಪ್ಪ ಉಪಸ್ಥಿತರಿದ್ದರು.