ಮಡಿಕೇರಿ, ಜ. 27: 68ನೇ ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ನಿಯೋಜಿತ ನಾಟಕ ಕಲಿಕಾ ಶಿಬಿರ ದಲ್ಲಿ ಅಕಾಡೆಮಿ ಸದಸ್ಯ ಮತ್ತು ರಂಗ ನಿರ್ದೇಶಕ ಮೋಹನ ಸೋನ ಅವರ ನಿರ್ದೇಶನದಲ್ಲಿ ಸಿದ್ಧಪಡಿಸಲಾದÀ ಅರೆಭಾಷಾ `ಕರ್ವಾಲೋ’ ನಾಟಕ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ರಂಗ ವೇದಿಕೆಯಲ್ಲಿ ಪ್ರದರ್ಶನಗೊಂಡಿತು.
`ಕರ್ವಾಲೋ’ ಕನ್ನಡದ ಖ್ಯಾತ ಕಾದಂಬರಿಕಾರ, ಪ್ರಗತಿ ಪರಚಿಂತಕ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸುಪ್ರಸಿದ್ಧ ಕಾದಂಬರಿಯಾದ್ದು, ಮೂವತ್ತಾರು ಬಾರಿ ಮುದ್ರಣಗೊಂಡಿರುವ ಕನ್ನಡದ ಈ ಕಾದಂಬರಿ ಹಲವು ದೇಶೀಯ ಭಾಷೆಗಳಲ್ಲಿ ಹಾಗೆ ಇಂಗ್ಲೀಷ್, ಜಪಾನಿ ಮೊದಲಾದ ಅನ್ಯದೇಶೀಯ ಭಾಷೆಗಳಲ್ಲೂ ಅನುವಾದಗೊಂಡ ವಿಶಿಷ್ಟ ವೈಜ್ಞಾನಿಕ ನೋಟದ ಕೃತಿಯಾಗಿದೆ. ಕರ್ವಾಲೋ ಕಾದಂಬರಿಯಲ್ಲಿ ಚಿತ್ರಣವಾಗುವ ಮಲೆನಾಡಿನ ಜೀವನ ಮತ್ತು ಅರೆಭಾಷಿಕ ಸಮುದಾಯದ ಜೀವನಕ್ರಮ ಸಮಾನವಾಗಿರುವ ಹಿನ್ನೆಲೆಯಲ್ಲಿ ಈ ಕಥಾವಸ್ತುವನ್ನು ರಂಗ ಭಾಷೆಗೆ ಅಳವಡಿಸಿಕೊಂಡು ಕಲಿಕಾ ರಂಗಶಿಬಿರದಲ್ಲಿ ನಾಟಕವನ್ನು ರೂಪಿಸಲಾಗಿತ್ತು. ತೇಜಸ್ವಿಯವರ ಈ ಕರ್ವಾಲೊ ಕಾದಂಬರಿಯನ್ನು ನಾಟಕ ರೂಪಕವಾಗಿ ರಂಗದಲ್ಲಿ ಒಡಮೂಡಿಸುವ ಪ್ರಯತ್ನವಾಗಿ ಅದರ ಅರೆಭಾಷ ಸ್ಕ್ರಿಪ್ಟ್ ಮತ್ತು ಸಾಹಿತ್ಯವನ್ನು ಅಕಾಡೆಮಿ ಸದಸ್ಯ, ಪ್ರಾಧ್ಯಾಪಕ ಡಾ.ಪೂವಪ್ಪಕಣಿಯೂರು ಸಿದ್ಧಪಡಿಸಿದ್ದರು.
ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಬರಹಗಾರ ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಆಪ್ತÀ ಡಾ. ನರೇಂದ್ರರೈ ದೇರ್ಲ ಅವರು ತೇಜಸ್ವಿ ಮತ್ತು ಪರಿಸರದೊಂದಿಗಿನ ಅನುಸಂಧಾನದ ಕುರಿತು ಮಾತಾಡಿದರು. ತೇಜಸ್ವಿ ಅವರ ಬರಹಗಳಲ್ಲಿ ಕಾಡಿನೊಂದಿಗೆÀ ನಾಡು ಉಂಟು ಮಾಡುವ ಅರಾಜಕತೆಯ ಚಿತ್ರಣವನ್ನು ಕಾಣಬಹುದು. ತೇಜಸ್ವಿ ಪ್ರಕೃತಿಯನ್ನು ಅಪ್ಪಿಕೊಂಡ ಬಗೆಯಲ್ಲಿ ಅಧ್ಯಯನದ ಕಾಳಜಿಯೇ ಪ್ರಧಾನ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು, ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಮತ್ತು ಸದಸ್ಯ ಬೋಜಪ್ಪಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯರಾದ ಬಿ.ಸಿ.ವಸಂತ, ಮಂದ್ರೀರ ಮೋಹನ್ ದಾಸ್, ಸಂಗೀತ ರವಿರಾಜ್, ಸದಾನಂದ ಮಾವಜಿ, ಯಶವಂತ ಕುಡೆಕಲ್ ಮತ್ತು ಅಣ್ಣಾಜಿಗೌಡ ಇವರು ಭಾಗವಹಿಸಿದ್ದರು. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ನಾಟಕ ಪ್ರದರ್ಶನ ಯಶಸ್ವಿಯಾಗಿದ್ದು, ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.