ಮಡಿಕೇರಿ, ಜ.7 : ಜಿಲ್ಲೆಯಲ್ಲಿರುವ ಮೂಲ ಆದಿವಾಸಿಗಳಿಗೆ ಆದಿವಾಸಿ ಅರಣ್ಯ ಹಕ್ಕು ಮಸೂದೆಯಡಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಮುಂದಿನ ಒಂದು ತಿಂಗಳೊಳಗೆ ನೀಡುವ ಮೂಲಕ ದಿಡ್ಡಳ್ಳಿಯಂತಹ ಸಮಸ್ಯೆಗಳು ಮತ್ತೆ ಸೃಷ್ಟಿಯಾಗದಂತೆ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜೆ.ಪಿ. ರಾಜು, 2006 ರಲ್ಲಿ ಜಾರಿಗೆ ಬಂದಿರುವ ಅರಣ್ಯ ಹಕ್ಕು ಮಸೂದೆಯನ್ನು ಇಲ್ಲಿಯವರೆಗೆ ಸಮರ್ಪಕವಾಗಿ ಜಾರಿಗೆ ತಾರದೆ ಇರುವದೇ ದಿಡ್ಡಳ್ಳಿಯಂತಹ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವೆಂದು ಅಭಿಪ್ರಾಯಪಟ್ಟರು. ತಲೆ ತಲಾಂತರಗಳಿಂದ ಕೊಡಗಿನ ಅರಣ್ಯ ಭಾಗದಲ್ಲಿ ವಾಸಿಸುತ್ತಿರುವ ಮೂಲ ಬುಡಕಟ್ಟು ನಿವಾಸಿಗಳಿಗೆ ಅಧಿಕಾರಿ ವರ್ಗ ಅರಣ್ಯ ಹಕ್ಕು ಕಾಯ್ದೆಯಡಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರೆ ಯಾವದೇ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ವೆಂದರು.

ದಿಡ್ಡಳ್ಳಿ ಹಾಗೂ ತಟ್ಟಳ್ಳಿಯಲ್ಲಿ ಗೌಡ ಸಮುದಾಯ ಮತ್ತು ಜೇನು ಕುರುಬ ಸಮುದಾಯ ಮಾತ್ರ ವಾಸ ಮಾಡುತ್ತಿರುವದು ಇಡೀ ಕೊಡಗಿಗೆ ತಿಳಿದ ವಿಚಾರವಾಗಿದೆ. ದಿಡ್ಡಳ್ಳಿ ಹಾಡಿಯಲ್ಲಿ ಇಲ್ಲಿಯವರೆಗೆ 38 ಕುಟುಂಬಗಳು ಮಾತ್ರ ಹಕ್ಕು ಪತ್ರ ಪಡೆದಿದೆ. ತಟ್ಟಳ್ಳಿ ಹಾಡಿಯ 36 ಕುಟುಂಬಗಳು ಅರಣ್ಯ ಹಕ್ಕು ಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಈ ಪ್ರಕ್ರಿಯೆಗೆ ಅರಣ್ಯ ಇಲಾಖೆÉ ತಡೆಯೊಡ್ಡಿದೆ.

ಇದಕ್ಕೆ ದಿಡ್ಡಳ್ಳಿ ಹಾಡಿಯ ಮುಖಂಡರೆಂದು ಪ್ರತಿಬಿಂಬಿಸಿ ಕೊಳ್ಳುತ್ತಿರುವ ಜೆ.ಕೆ. ಅಪ್ಪಾಜಿ ಹಾಗೂ ಜೆ.ಕೆ. ಮುತ್ತಮ್ಮ ಅವರು ಕಾರಣಕರ್ತರು ಎಂದು ಆರೋಪಿಸಿದ ಜೆ.ಪಿ.ರಾಜು, ಇತ್ತೀಚೆಗೆ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನೆಲೆ ಕಂಡು ಕೊಂಡಿರುವವರಲ್ಲಿ ನೈಜ ಮೂಲನಿವಾಸಿ ಬುಡಕಟ್ಟು ಜನರು ಯಾರು ಎನ್ನುವದನ್ನು ಪತ್ತೆ ಹಚ್ಚಿ ಹಕ್ಕು ಪತ್ರ ಮತ್ತು ಮೂಲಭೂತ ಸೌಲಭ್ಯ ನೀಡಲು ಸರ್ಕಾರ ಮುಂದಾಗಬೇಕೇ ಹೊರತು ಅರ್ಹರಲ್ಲದವರಿಗೆ ಯಾವದೇ ಸೌಲಭ್ಯ ನೀಡಬಾರದೆಂದು ಒತ್ತಾಯಿಸಿದರು.

ಸಂಘದÀ ವೀರಾಜಪೆÉೀಟೆ ತಾಲೂಕು ಅಧ್ಯಕ್ಷ ಜೆ.ಕೆ. ರಾಮು ಮಾತನಾಡಿ, ಕೊಡಗು ಜಿಲ್ಲೆಯಾದ್ಯಂತ ನಿವೇಶನವಿಲ್ಲದ ನಿರಾಶ್ರಿತ ಬುಡಕಟ್ಟು ಜನರು ಸಾಕಷ್ಟಿದ್ದರೂ ಆಡಳಿತ ವ್ಯವಸ್ಥೆ ಕೇವಲ ದಿಡ್ಡಳ್ಳಿಯನ್ನು ಮಾತ್ರ ಗುರಿಯಾಗಿಸಿಕೊಂಡು ಮೂಲಭೂತ ಸೌಲಭ್ಯಗಳನ್ನು ನೀಡುತ್ತಿರುವದು ಸರಿಯಾದ ಕ್ರಮವಲ್ಲವೆಂದರು. ದಿಡ್ಡಳ್ಳಿಯಲ್ಲಿ ಸುಮಾರು 100 ರಿಂದ 150 ಮಂದಿ ಮಾತ್ರ ಅನ್ಯಾಯಕ್ಕೆ ಒಳಗಾದವರಿದ್ದು, ಉಳಿದವರು ಖಾಸಗಿ ಕಂಪೆನಿ ತೋಟಗಳಲ್ಲಿ ಎಲ್ಲಾ ಸೌಲಭ್ಯ ಪಡೆಯುತ್ತಾ ಜೀವನ ಸಾಗಿಸುತ್ತಿರುವವರಾಗಿದ್ದಾರೆ ಎಂದು ಆರೋಪಿಸಿದರು.

ಯಾವದೇ ಸೌಲಭ್ಯಗಳಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಮೂಲ ನಿವಾಸಿ ಆದಿವಾಸಿಗಳಿಗೆ ನಿವೇಶನದ ಹಕ್ಕು ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡದೆ, ದಿಢೀರಾಗಿ ಪ್ರತಿಭಟನೆಯ ರೂಪದಲ್ಲಿ ನೆಲೆ ನಿಂತವರಿಗೆ ಸರ್ಕಾರ ಮಣೆ ಹಾಕುತ್ತಿರುವದು ಖಂಡನೀಯ ವೆಂದರು. ನಿರಾಶ್ರಿತರೆಂದು ಹೇಳಿಕೊಂಡು ಕಾನೂನನ್ನು ಮೀರಿ ದಿಡ್ಡಳ್ಳಿಯಲ್ಲಿ ನೆಲೆ ನಿಂತವರನ್ನು ತಕ್ಷಣ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಈ ಹಿಂದೆ ನೆಲೆ ಕಂಡುಕೊಂಡಿದ್ದ ಸ್ಥಳದಲ್ಲೆ ನಿವೇಶನ ನೀಡಲಿ ಎಂದು ಜೆ.ಕೆ. ರಾಮು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ವಿಭಾಗದ ಶಾಸಕರೊಬ್ಬರು ಸುಳ್ಳು ಜಾತಿ ಪತ್ರ ಹಾಗೂ ಇತರ ದಾಖಲಾತಿ ಸೃಷ್ಟಿಸಿ ಗಿರಿಜನರ ಕೋಟಾದಲ್ಲಿ ಮೈಸೂರಿನಲ್ಲಿ ಗ್ಯಾಸ್ ಏಜೆನ್ಸಿ ಯೊಂದನ್ನು ಪಡೆದುಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಕರಣದಲ್ಲಿ ಜೆ.ಕೆ. ಅಪ್ಪಾಜಿ ಹಾಗೂ ಜೆ.ಕೆ.ಮುತ್ತಮ್ಮನವರ ಕೈವಾಡವಿದೆ ಎಂದು ಜೆ.ಕೆ. ರಾಮು ಆರೋಪಿಸಿದರು.

ತಾ.ಪಂ. ಸದಸ್ಯೆ ಜೆ.ಆರ್. ಇಂದಿರಾ ಮಾತನಾಡಿ, ದಿಡ್ಡಳ್ಳ್ಳಿಯಲ್ಲಿ ನಿರಾಶ್ರಿತರೆಂದು ಹೇಳಿಕೊಂಡು ನೆಲೆ ನಿಂತವರಿಗೆ ಮೂಲಭೂತ ಸೌಲಭ್ಯ ಗಳನ್ನು ನೀಡಲು ಬಿಡುಗಡೆಯಾಗಿರುವ ರೂ. 1 ಕೋಟಿ ದುರುಪಯೋಗ ವಾಗುತ್ತಿದೆ. ತಲತಲಾಂತರಗಳಿಂದÀ ನೆಲೆ ನಿಂತಿರುವ ಆದಿವಾಸಿಗಳಿಗೆ ಹಕ್ಕುಪತ್ರ ನೀಡದೆ ವಂಚಿಸಲಾಗುತ್ತಿದೆ. ಆದಿವಾಸಿಗಳನ್ನು ಭಿಕ್ಷುಕರಂತೆ ಕಾಣಲಾಗುತ್ತಿದ್ದು, ಎಲ್ಲಿಂದಲೋ ಬಂದು ನೆಲೆ ನಿಂತವರಿಗೆ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು. ದಿಡ್ಡಳ್ಳಿಯಲ್ಲಿ ಆಶ್ರಯ ಪಡೆದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಪಕ್ಕದಲ್ಲೆ ಇರುವ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೂ ಅಡಚಣೆ ಉಂಟಾಗಿದೆ. ಮಕ್ಕಳ ಶೈಕ್ಷಣಿಕ ಬದುಕಿನ ಹಿತ ದೃಷ್ಟಿಯಿಂದ ಇಲ್ಲಿ ನೆಲೆ ನಿಂತವರನ್ನು ಸ್ಥಳಾಂತರ ಮಾಡಬೇಕೆಂದು ಇಂದಿರಾ ಒತ್ತಾಯಿಸಿದರು.

ಪ್ರತಿಯೊಂದು ಕುಟುಂಬದ ದಾಖಲೆಗಳನ್ನು ಕಲೆ ಹಾಕಿ ನಂತರ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕೆಂದ ಅವರು, ನಾಗರಹೊಳೆÉಯಲ್ಲಿರುವ ಬುಡಕಟ್ಟು ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘÀದ ಪ್ರಮುಖರಾದ ಪ್ರಕಾಶ್ ಹಾಗೂ ಜೆ.ಕೆ.ತಿಮ್ಮ ಉಪಸ್ಥಿತರಿದ್ದರು.