ಮಡಿಕೇರಿ, ಆ. 17: ಅರಣ್ಯ ಹಕ್ಕು ಕಾಯ್ದೆ-2006ರ ಪ್ರಕಾರ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿ ಸಮುದಾಯದ ಪ್ರತಿ ಕುಟುಂಬಗಳಿಗೆ ನಾಲ್ಕು ಹೆಕ್ಟೇರ್ ಭೂಮಿ ನೀಡಬೇಕೆಂದು ನಿಯಮ ವಿದ್ದರೂ ಇದನ್ನು ಸರಕಾರಗಳು ಇಲ್ಲಿಯವರೆಗೆ ಪಾಲಿಸದೇ ಇರುವದರಿಂದ ತಾ. 20 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿರುವದಾಗಿ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ವೀರಾಜಪೇಟೆ ತಾಲೂಕು ಅಧ್ಯಕ್ಷ ಜೆ.ಕೆ. ದಾಸಪ್ಪ, ಸರ್ಕಾರಗಳು ಆದಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿದರು. ತಲತಲಾಂತರ ಗಳಿಂದ ಅರಣ್ಯ ಮತ್ತು ವನ್ಯ ಜೀವಿಗಳನ್ನು ರಕ್ಷಿಸುತ್ತಾ ಬರುತ್ತಿರುವ ಆದಿವಾಸಿಗಳಿಗೆ ಅವರು ವಾಸ ಮಾಡುತ್ತಿರುವ ಪ್ರದೇಶದಲ್ಲೇ 5 ಏಕರೆ ಭೂಮಿಯನ್ನು ನೀಡಲಿ, ಇಲ್ಲವಾದಲ್ಲಿ ವಿಷವನ್ನು ನೀಡಲಿ ಎಂದು ಒತ್ತಾಯಿಸಿದರು.

ನಾವು ಕೂಡ ಭಾರತೀಯ ಪ್ರಜೆಗಳಾಗಿದ್ದು, ಅರಣ್ಯವನ್ನು ರಕ್ಷಿಸುತ್ತ ಬಂದಿರುವ ಆದಿವಾಸಿಗಳಿಗೆ ಅರಣ್ಯದ ಮೇಲೆ ಹಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರಮುಖರಾದ ಪಣಿಯರವರÀ ಗಪ್ಪು ಮಾತನಾಡಿ, ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆದಿವಾಸಿ ಗಳಿಗೆ ಪುನರ್ ವಸತಿ ಕಲ್ಪಿಸಲು 400 ಏಕರೆ ಭೂಮಿ ಮೀಸಲಿಡುವ ಭರವಸೆ ನೀಡಿದ್ದಾರೆ. ಇದನ್ನು ಸಚಿವರು ಮೊದಲು ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ಕನಿಷ್ಟ ಎರಡು ಏಕರೆ ಜಾಗ ನೀಡಲಾಗದ ವರು 400 ಏಕರೆ ಭೂಮಿಯನ್ನು ಮೀಸಲಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರ ಭೂಮಿ ನೀಡುತ್ತದೆ ಎಂದು ಹಳ್ಳಿಗಟ್ಟಿನ ಲೈನ್ ಮನೆಗಳಿಂದ ಸುಮಾರು 108 ಕುಟುಂಬಗಳು ಹೊರ ಬಂದಿದ್ದು, ಸರ್ಕಾರದ ಹುಸಿ ಭರವಸೆಯಿಂದ ಅತಂತ್ರ ಸ್ಥಿತಿ ಅನುಭವಿಸುತ್ತಿವೆ ಎಂದು ಆರೋಪಿಸಿದರು.

ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಪಿ.ತಮ್ಮಯ್ಯ ಮಾತನಾಡಿ, 2006 ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಭೂಮಿ ಹಕ್ಕು ನೀಡಬೇಕು. ಆದರೆ, ದೇವರ ಕಾಡಿನ ನೆಪವೊಡ್ಡಿ ಭೂಮಿ ಸಿಗದಂತೆ ನೋಡಿ ಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ದೇವರ ಕಾಡಿನಲ್ಲಿರುವ ಆದಿವಾಸಿ ಗಳಿಗೂ ಭೂಮಿಯ ಹಕ್ಕನ್ನು ನೀಡ ಬೇಕೆಂದು ಅವರು ಒತ್ತಾಯಿಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾ. 20 ರಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಹಯೋಗ ದೊಂದಿಗೆ ವಿಧಾನಸೌಧsÀಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಂಡಿರುವದಾಗಿ ತಮ್ಮಯ್ಯ ತಿಳಿಸಿದರು.

ಈ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಹೆಚ್ಚಿಗೆ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಹೋರಾಟಕ್ಕೆ ಪೂರ್ವಭಾವಿಯಾಗಿ ತಾ. 18 ರಂದು (ಇಂದು) ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವ ದೆಂದು ಅವರು ಹೇಳಿದರು.

ಆದಿವಾಸಿಗಳು ವಾಸವಿರುವ ನಾಲ್ಕು ಹೆಕ್ಟೇರ್ ಭೂಮಿಗೆ ಹಕ್ಕು ಪತ್ರ ನೀಡಬೇಕು, ಅರಣ್ಯ ಪ್ರದೇಶದಲ್ಲಿ ವಸತಿ ಹಕ್ಕನ್ನು ಮಾನ್ಯ ಮಾಡಬೇಕು, ಸಮುದಾಯ ಹಕ್ಕು ಪತ್ರ ನೀಡಬೇಕು, ಅರಣ್ಯ ಪ್ರದೇಶದಿಂದ ಹೊರಗಿರುವ ಬುಡಕಟ್ಟು ಕುಟುಂಬಗಳಿಗೆ ತಲಾ 5 ಏಕರೆ ಪೈಸಾರಿ ಭೂಮಿಯನ್ನು ನೀಡಬೇಕು, ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವು ಗೊಳಿಸಿ ದಲಿತರು ಹಾಗೂ ಬಡವರಿಗೆ ಹಂಚಬೇಕು, ಭೂಮಿತಿ ಕಾಯ್ದೆಯನ್ನು ಪರಿಷ್ಕರಿಸಬೇಕು, ದೇವರ ಕಾಡಿನಲ್ಲಿ ವಾಸವಿರುವ ಕುಟುಂಬಗಳಿಗೆ ಭೂಮಿಯ ಹಕ್ಕು ಪತ್ರ ಮತ್ತು ಸಮುದಾಯ ಹಕ್ಕು ಪತ್ರ ನೀಡಬೇಕು, ಲೈನ್ ಮನೆಗಳಲ್ಲಿರುವ ಬುಡಕಟ್ಟು ಕುಟುಂಬಗಳನ್ನು ಮುಕ್ತಗೊಳಿಸಿ ತಲಾ 5 ಏಕರೆ ಕೃಷಿ ಭೂಮಿ ನೀಡಬೇಕು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮುದಾಯದ ಸದಸ್ಯರನ್ನು ಒಳಗೊಂಡು ಭೂಮಿಯ ಹಕ್ಕು ಸಮನ್ವಯ ಸಮಿತಿ ರಚನೆಯಾಗಬೇಕು ಮತ್ತು ಈ ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಪ್ರಗತಿ ಪರಿಶೀಲಿಸಬೇಕೆಂದು ಒಕ್ಕೂಟದ ಪ್ರಮುಖರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹೇಮಾ ಹಾಗೂ ಮಾದೇವಿ ಉಪಸ್ಥಿತರಿದ್ದರು.