ಮಡಿಕೇರಿ, ಜ. 22: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಧಾಳಿ, ಹುಲಿ ಧಾಳಿ, ಅತಿರೇಕಕ್ಕೆ ತಲಪಿದ್ದರೂ, ರಾಜ್ಯದ ಅರಣ್ಯ ಸಚಿವರು ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಜೆಡಿಎಸ್ ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಈ ಕ್ಷಣವೇ ಅವರು ರಾಜೀನಾಮೆ ನೀಡಬೇಕು. ತಪ್ಪಿದಲ್ಲಿ ಮುಖ್ಯಮಂತ್ರಿಗಳೇ ನೇರವಾಗಿ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಕಾಡಾನೆ ಧಾಳಿಗೆ ಜೀವಹಾನಿ ಸಂಭವಿಸುತ್ತಿದೆ. ಇಂದು ಕೂಡ ಒಬ್ಬರು ಬೆಳೆಗಾರರು ಕಾಡಾನೆ ಧಾಳಿಗೆ ತುತ್ತಾಗಿದ್ದಾರೆ. ಹುಲಿ ಧಾಳಿಯಿಂದಲೂ ವ್ಯಕ್ತಿಯೋರ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಕೆಲವು ಸಮಯದಿಂದ ಅದೆಷ್ಟೋ ಮಂದಿ ಬಲಿಯಾಗಿದ್ದರೂ ಅರಣ್ಯ ಸಚಿವರು ಕನಿಷ್ಟ ಪಕ್ಷ ಜಿಲ್ಲೆಗೆ ಆಗಮಿಸಿ ಪರಿಸ್ಥಿತಿಯ ಕುರಿತು ಚರ್ಚೆ ನಡೆಸುವದಾಗಲಿ, ಯೋಜನೆ ರೂಪಿಸುವ ಪ್ರಯತ್ನವನ್ನಾಗಲೀ ನಡೆಸಿಲ್ಲ. ಜಿಲ್ಲೆಯ ಬೆಳೆಗಾರರು, ಕಾರ್ಮಿಕರು ಪ್ರತಿದಿನ ಆತಂಕದ ನಡುವೆ ದಿನ ಕಳೆಯುವಂತಾಗಿದೆ. ಇಂತಹ ಗಂಭೀರತೆ ಇದ್ದರೂ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಅರಣ್ಯ ಸಚಿವರು ರಾಜೀನಾಮೆ ನೀಡುವದೇ ಸೂಕ್ತ ಎಂದು ಸಂಕೇತ್ ಪೂವಯ್ಯ ಹೇಳಿದ್ದಾರೆ.