ಕುಶಾಲನಗರ, ಜು. 13: ಕೊಡಗು ಜಿಲ್ಲೆಯಲ್ಲಿ ಉತ್ತಮ ಅರಣ್ಯ ನಿರ್ಮಾಣಕ್ಕಾಗಿ ಇಲಾಖೆ ಮೂಲಕ ಹಲವು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ. ಅವರು ಕುಶಾಲನಗರ ಸಮೀಪ ಆನೆಕಾಡು ಮತ್ತು ಅತ್ತೂರು ಅರಣ್ಯ ವಲಯಗಳಲ್ಲಿ ಕೋಟಿವೃಕ್ಷ ಆಂದೋಲನದಡಿಯಲ್ಲಿ ಅರಣ್ಯದಲ್ಲಿ ಮರ-ಗಿಡಗಳ ಬೀಜ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯಗಳಲ್ಲಿ ಕಾಡು ಪ್ರಾಣಿಗಳಿಗೆ ಯಥೇಚ್ಚವಾಗಿ ಆಹಾರ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪರಿಸರ ಪೂರಕ ಗಿಡ-ಮರಗಳ ಬೀಜಗಳನ್ನು ಬಿತ್ತನೆ ಮಾಡುವದು, ಸಸಿಗಳನ್ನು ನೆಡುವದು ಹಾಗೂ ಕಾಡಿನಂಚಿನಲ್ಲಿ ಕೆರೆಗಳ ನಿರ್ಮಾಣ ಕಾರ್ಯಕೈಗೊಳ್ಳುವ ಮೂಲಕ ವನ್ಯ ಪ್ರಾಣಿಗಳ ಸಂರಕ್ಷಣೆಗೆ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸುಮಾರು ಈಗಾಗಲೇ ಕೋಟಿವೃಕ್ಷ ಯೋಜನೆಯಡಿಯಲ್ಲಿ ಮಡಿಕೇರಿ ವಿಭಾಗದಲ್ಲಿ 1.5 ಲಕ್ಷ ಗಿಡಗಳನ್ನು ನೆಡಲಾಗಿದೆ. ಎಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಶಾಲನಗರ ಅರಣ್ಯ ವಲಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾತನಾಡಿ, ಪರಿಸರಕ್ಕೆ ಪೂರಕವಾದ ಅಂಟವಾಳ, ರಾಗಿ, ಬಿದಿರು, ಹಲಸು ಮುಂತಾದ ಮರ ಗಿಡಗಳ ಬೀಜಗಳನ್ನು ಬಿತ್ತುವ ಮೂಲಕ ಅರಣ್ಯ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರುವದನ್ನು ತಪ್ಪಿಸಬಹುದಾಗಿದೆ. ಸುಮಾರು 300 ಕೆ.ಜಿ. ಬೀಜಗಳು ಹಾಗೂ 500 ಕೆ.ಜಿ.ಗೂ ಅಧಿಕ ರಾಗಿ ಬಿತ್ತನೆಯನ್ನು ಕಾಡಿನಲ್ಲಿ ಮಾಡಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದು, ಯುವಪೀಳಿಗೆಗೆ ಪರಿಸರ ಜ್ಞಾನ ಮೂಡಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಮಾತನಾಡಿ, ಪರಿಸರದ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕೆಎಂಟಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಬೀಜ ಬಿತ್ತನೆಯಲ್ಲಿ ತೊಡಗಿಸಿಕೊಂಡರು.
ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ, ಲ್ಯಾಂಪ್ಸ್ ನಿರ್ದೇಶಕರಾದ ಮೋಹನ್, ಕಾವೇರಪ್ಪ, ಉಪ ಅರಣ್ಯ ವಲಯಾಧಿಕಾರಿ ಬಾನಂಡ ದೇವಿಪ್ರಸಾದ್, ಶಿವರಾಂ ಹಾಗೂ ಸಿಬ್ಬಂದಿಗಳು ಇದ್ದರು.