ಕೂಡಿಗೆ, ಡಿ. 19: ಅರಣ್ಯ ಇಲಾಖೆಯ ವತಿಯಿಂದ ರಾಷ್ಟ್ರ ಪಕ್ಷಿ ಸಂರಕ್ಷಣೆ ಹಾಗೂ ಜಿಂಕೆಗಳು ಸಮೀಪದ ಜಮೀನುಗಳಿಗೆ ತೆರಳದಂತೆ ಹಾಗೂ ಕೊಡಗಿನ ಶ್ರೀಗಂಧ ರಕ್ಷಣೆಗೆ ಅರಣ್ಯ ಇಲಾಖೆಯ ವತಿಯಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಜೇನುಕಲ್ಲುಬೆಟ್ಟಕ್ಕೆ ಹೊಂದಿ ಕೊಂಡಂತಿರುವ ಉದ್ದಿನಮಂಟಿಯ ಕೊನೆಯ ಭಾಗದವರೆಗೆ ರಾಷ್ಟ್ರ ಪಕ್ಷಿ ನವಿಲು, ಹಾಗೂ ಜಿಂಕೆಗಳ ಸಂರಕ್ಷಣೆಗೆ ಅಳವಡಿಸಿದ್ದ ಚೈನ್‍ಲಿಂಕ್ ಬೇಲಿ ಯನ್ನು ನಿರ್ಮಾಣ ಮಾಡಲಾಗಿತ್ತು. ಚೈನ್‍ಲಿಂಕ್ ಬೇಲಿಗೆ ಅರಣ್ಯ ಇಲಾಖೆಯ ವತಿಯಿಂದ ಟೆಂಡರ್ ಮೂಲಕ ಕಾಮಗಾರಿ ಕೈಗೊಂಡು ನಿರ್ಮಾಣಗೊಳಿಸಲಾಗಿತ್ತು. ಇದೀಗ ಅರಣ್ಯ ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ಚೈನ್‍ಲಿಂಕ್ ಬೇಲಿಯು ನೆಲಕ್ಕುರುಳಿ ತುಕ್ಕು ಹಿಡಿಯುತ್ತಿದೆ ಎಂಬ ವಿಷಯವನ್ನು ತಾ.18ರ ಶಕ್ತಿ ಪತ್ರಿಕೆಯಲ್ಲಿ ವರದಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚೈನ್ ಲಿಂಕ್ ಬಗ್ಗೆ ಈಗಾಗಲೇ ಸರಕಾರಕ್ಕೆ ಮಾಹಿತಿ ನೀಡಲಾಗಿದೆ. ದುರಸ್ತಿ ಪಡಿಸುವ ಬಗ್ಗೆ ಮೇಲಾಧಿಕಾರಿಗಳ ಗಮನದಲ್ಲಿದ್ದು, ಈ ಭಾಗದಲ್ಲಿ ಹೆಚ್ಚು ಆನೆಗಳು ದಾಟುವದರಿಂದ ಕಾಡಾನೆಗಳು ಮನಬಂದಂತೆ ಚೈನ್‍ಲಿಂಕ್‍ಗಳನ್ನು ನೆಲಕ್ಕುರುಳಿಸುತ್ತವೆ. ಈ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ದುರಸ್ಥಿಪಡಿಸಲು ಹಣ ಮಂಜೂರಾತಿ ಬಂದಾಗ ತುರ್ತಾಗಿ ಕ್ರಮಕೈಗೊಳ್ಳಲಾಗುವದು ಎಂದರು.