ಮಡಿಕೇರಿ, ಆ. 6: ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ರಂಜನ್ ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಇವರ ವಿರುದ್ಧ ದುರುದ್ದೇಶದಿಂದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಬಬ್ಬೀರ ಸರಸ್ವತಿ ನಿರಾಧಾರ ಆರೋಪಗಳನ್ನು ಮಾಡುವ ಮೂಲಕ ಮಾನಸಿಕ ಖಿನ್ನತೆಯನ್ನು ಉಂಟು ಮಾಡುತ್ತಿ ದ್ದಾರೆ ಎಂದು ಕುಶಾಲನಗರದ ಭಾರ್ಗವಿ ಸ್ತ್ರೀ ಶಕ್ತಿ ಮಹಿಳಾ ಸಂಘ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖರು ಹಾಗೂ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ, ದಕ್ಷ ಅಧಿಕಾರಿಗಳ ಮೇಲೆ ನಿರಂತರವಾಗಿ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉಪ ವಲಯ ಅರಣ್ಯ ಅಧಿಕಾರಿ ರಂಜನ್ ಅವರಿಗೆ ಇತ್ತೀಚೆಗೆ ದಕ್ಷ ಅಧಿಕಾರಿ ಎಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆದರೆ ನಿಯಮ ಬಾಹಿರ ತೇಗದ ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜನ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕಾರಣಕ್ಕಾಗಿ ಬಬ್ಬೀರ ಸರಸ್ವತಿ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ಸಂಬಂಧಿಯೊಬ್ಬರಿಗೆ ಸೇರಿದ ಮರವಾದ ಕಾರಣ ಇದನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಯ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಫಿಲೋಮಿನಾ ಹೇಳಿದರು. ಮಹಿಳಾ ಸಂಘದ ಅಧ್ಯಕ್ಷೆ ಹೆಲೆನ್ ಮಾತನಾಡಿ, ಮರದ ಮಿಲ್ನಲ್ಲಿದ್ದ ತೇಗದ ಮರಗಳನ್ನು ಅಧಿಕಾರಿ ರಂಜನ್ ನೇತೃತ್ವದ ತಂಡ ವಶಪಡಿಸಿಕೊಂಡು ಒಂದು ತಿಂಗಳಾದ ನಂತರ ಉದ್ದೇಶ ಪೂರ್ವಕವಾಗಿ ಈ ಪ್ರಕರಣದ ಕುರಿತು ಹಾದಿ ತಪ್ಪಿಸುವ ಯತ್ನ ನಡೆಯುತ್ತಿದೆ. ದಕ್ಷ ಅಧಿಕಾರಿ ರಂಜನ್ ಅವರಿಗೆ ಪ್ರಶಸ್ತಿ ದೊರೆತ ಹಿನ್ನೆಲೆ ಇದನ್ನು ಸಹಿಸದ ಕೆಲವು ರಾಜಕೀಯ ಪ್ರೇರಿತ ಪಟ್ಟಭದ್ರ ಹಿತಾಸಕ್ತಿಗಳು ಕಿರುಕುಳ ನೀಡಲು ಮುಂದಾಗಿದ್ದಾರೆ. ಹಿರಿಯ ಅಧಿಕಾರಿಗಳು ರಂಜನ್ ಅವರ ಮೇಲಿನ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು. ದಕ್ಷ ಅಧಿಕಾರಿಗಳ ಮೇಲೆ ದರ್ಪದ ವರ್ತನೆಯನ್ನು ನಿಲ್ಲಿಸದಿದ್ದಲ್ಲಿ ಹೋರಾಟವನ್ನು ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು. ಕುಶಾಲನಗರ ಪೊಲೀಸ್ ಠಾಣೆÉಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನೂಪ್ ಮಾದಪ್ಪ ಅವರನ್ನು ಕೂಡ ಇತ್ತೀಚೆಗೆ ವರ್ಗಾವಣೆ ಮಾಡಲಾಗಿದೆ. ಇದೇ ರೀತಿಯಾಗಿ ಕುಶಾಲನಗರ ವಿಭಾಗದಲ್ಲಿ ದಕ್ಷ ಅಧಿಕಾರಿಗಳ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಹೆಲೆನ್ ಆರೋಪಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕೆ.ಪಿ. ರಷೀದ, ಕುಶಾಲನಗರ ಅಧ್ಯಕ್ಷೆ ಕೆ.ಎನ್. ಅಸ್ಮಾ, ಪ್ರಧಾನ ಕಾರ್ಯದರ್ಶಿ ರತ್ನಾ ಯತೀಶ್ ಹಾಗೂ ಸದಸ್ಯ ಹನಿತ್ ಉಪಸ್ಥಿತರಿದ್ದರು.