*ಗೋಣಿಕೊಪ್ಪಲು, ಡಿ. 27: ಅರಣ್ಯದಲ್ಲಿ ಬೆಂಕಿ ಮಾರ್ಗ ನಿರ್ಮಸುವ ಸಂದರ್ಭ ಆಕಸ್ಮಿಕವಾಗಿ ಗಾಳಿಗೆ ಬೆಂಕಿ ಕಿಡಿ ಹರಡಿ ಕಾಳ್ಗಿಚ್ಚು ಅರಣ್ಯಕ್ಕೆ ಹರಡಿದ ಘಟನೆ ಆನೆಚೌಕೂರು ಬಳಿಯ ಮಾವಕಲ್ ಅರಣ್ಯದಲ್ಲಿ ಮಂಗಳವಾರ ಜರುಗಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಹರಡುವದನ್ನು ತಪ್ಪಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಚೌಕೂರು ಬಳಿ ಅರಣ್ಯದ ಮಧ್ಯದ ಮಾರ್ಗವನ್ನು ಸುಡುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಿಸಿದ ಗಾಳಿಗೆ ಬೆಂಕಿ ಕಿಡಿ ಪಕ್ಕದಲ್ಲಿಯೇ ಇದ್ದ ಒಣಗಿದ ಬಿದಿರಿಗೆ ಹಬ್ಬಿದೆ. ಇದರಿಂದ ದಿಕ್ಕು ತೋಚದಾದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಆದರೆ ಬೆಂಕಿಯ ಕೆನ್ನಾಲಗೆ ರಭಸದಿಂದ ಮುನ್ನುಗುತ್ತಿತ್ತು. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಚೆಲ್ಲಿದರು. ಈ ಸಂದರ್ಭದಲ್ಲಿ ಬೆಂಕಿ ನಂದಿಸಲು ಗೋಣಿಕೊಪ್ಪಲಿನ ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ವಾಹನ ಅರಣ್ಯದತ್ತ ಧಾವಿಸಿದೆ.ಆದರೆ ವಾಹನ ವೇಗವಾಗಿ ತೆರಳುವಾಗ ಮಾರ್ಗದ ಮಧ್ಯದಲ್ಲಿ ಕೆಟ್ಟು ನಿಂತಿತು. ಮತ್ತೆ ಅರಣ್ಯ ಇಲಾಖೆಯವರು ಗಾಬರಿಗೊಂಡು ಪಿರಿಯಾಪಟ್ಟಣದ ಅಗ್ನಿಶಾಮಕ ಠಾಣಗೆ ದೂರುಸಲ್ಲಿಸಿದರು.ಕೂಡಲೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ವಾಹನ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತಂದಿತು.

ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟರು. ವನ್ಯ ಜೀವಿ ವಿಭಾಗದ ಸಿಬ್ಬಂದಿಗಳು ಸಾಕಾನೆ ಶಿಬಿರದ ಮಾವುತರು, ಹಾಗೂ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಚಿತ್ರ ವರದಿ : ಎನ್.ಎನ್.ದಿನೇಶ್