ಸೋಮವಾರಪೇಟೆ, ಜ. 10: ಕಲ್ಕಂದೂರು ಸಮೀಪದ ಕೂಡುರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ಶಾಸ್ತ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಾಧ್ಯಕ್ಷರ ಸಮ್ಮುಖದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಸ್ವಾಮಿಗೆ ವಿವಿಧ ಪೂಜೆಗಳು ನಡೆದವು. ಸಂಜೆ 7 ಗಂಟೆಗೆ ಕಲ್ಕಂದೂರಿನ ಶ್ರೀ ಮಹದೇಶ್ವರ ದೇವಾಲಯ ಬಳಿಯಿಂದ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿಯ ಬೃಹತ್ ಭಾವಚಿತ್ರವನ್ನಿರಿಸಿ, ಕೇರಳದ ಚಂಡೆಮದ್ದಳೆ, ದೀಪಾರಾಧನೆ, ಕಲಶÀ ಸೇರಿದಂತೆ ಭಕ್ತರ ಮೆರವಣಿಗೆಯು ಗೋ ಮಾತೆಯ ಮುಂದಾಳತ್ವದಲ್ಲಿ ಸಾಗಿ ಮಂದಿರವನ್ನು ಪ್ರವೇಶಿಸಿತು.

ನಂತರ ಮಂದಿರದಲ್ಲಿ ವಿವಿಧ ಪೂಜೆಗಳು ನೆರವೇರಿತು. ಈ ಸಂದರ್ಭ ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ನಡೆಸಿದ ಭಜನೆ ಕಾರ್ಯಕ್ರಮ ನೆರೆದಿದ್ದವರನ್ನು ಭಕ್ತಿ-ಭಾವದೆಡೆಗೆ ಕರೆದೊಯ್ದಿತು. ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪೂಜೋತ್ಸವದ ಯಶಸ್ವಿಗೆ ಶಾಸ್ತ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್. ಲೋಕೇಶ್, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕೆ.ಬಿ. ಸುರೇಶ್, ಗ್ರಾಮದ ಪ್ರಮುಖ ತಿಮ್ಮಯ್ಯ ಸೇರಿದಂತೆ ಸದಸ್ಯರುಗಳು ಶ್ರಮಿಸಿದರು.